- ‘ಸಿಎಂ ಆಗುವ ಅದೃಷ್ಟ ಕೂಡಿ ಬರಲಿ, ನನಗೂ ಆಸೆಯಿದೆ’
- ‘ಬಹಳ ಅರ್ಹರು ಇದ್ದು, ಎಲ್ಲರಿಗೂ ಚಾನ್ಸ್ ಸಿಗಲಿ ಬಿಡಿ’
ಪರಮೇಶ್ವರ್ ಸಿಎಂ ಆಗಲಿ ಎಂಬ ರಾಜಣ್ಣನವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, “ನಾನು ಅವರಿಗೆ ಆಭಾರಿಯಾಗಿದ್ದು ಆ ಅದೃಷ್ಟ ಬೇಗ ಕೂಡಿ ಬರಲಿ ಅಂತ ನಾನು ಆಸೆಪಡುತ್ತೇನೆ. ಆ ಅದೃಷ್ಟ ಯಾವಾಗ ಕೂಡಿ ಬರುತ್ತೆ ಅಂತ ಹೇಳಲು ಆಗುವುದಿಲ್ಲ” ಎಂದು ತಿಳಿಸಿದರು.
ತಮ್ಮ ಮನೆಯಲ್ಲಿ ಸಿಎಂ ಊಟದ ನೆಪದಲ್ಲಿ ಸಭೆ ನಡೆಸಿದ ವಿಚಾರವಾಗಿ ಮಾತನಾಡಿ, “ನಮ್ಮ ಮನೆಯಲ್ಲಿ ಯಾವುದೇ ತರಹದ ಚರ್ಚೆ ಆಗಿಲ್ಲ. ಬಹಳ ಅರ್ಹರು ಇದ್ದಾರೆ. ಎಲ್ಲರೂ ಒಂದೊಂದು ಚಾನ್ಸ್ ತಗೊಳ್ಳಲಿ ಬಿಡಿ” ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಿಯಾಂಕ ಖರ್ಗೆಗೆ ಹಾಗೂ ಪರಮೇಶ್ವರ್ ಗೆ ನಾಚಿಕೆ ಆಗ್ಬೇಕು ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, “ಸಿಎಂ ಸಿದ್ದರಾಮಯ್ಯ ಅವರು ಹೇಳುವ ಹಾಗೆ, ಈಶ್ವರಪ್ಪಗೆ ಮೆದುಳು ಹಾಗೆ ನಾಲಿಗೆಗೆ ಲಿಂಕ್ ತಪ್ಪಿದೆ. ನಾನು ಅದನ್ನೆ ಹೇಳುವೆ” ಎಂದು ತಿರುಗೇಟು ನೀಡಿದರು.
ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ ಬೇಡ ಎಂದರೆ, ಪರಮೇಶ್ವರ್ ಸಿಎಂ ಆಗಲಿ: ಸಹಕಾರ ಸಚಿವ ಕೆ ಎನ್ ರಾಜಣ್ಣ
“ಔರಾದ್ಕರ್ ವರದಿ ವಿಚಾರಕ್ಕೆ ಸಂಬಂಧಿಸಿ, ಔರಾದ್ಕರ್ ವರದಿಯನ್ನ ಸಂಪೂರ್ಣವಾಗಿ ಅನುಷ್ಠಾನ ಮಾಡಿಲ್ಲ. ಮತ್ತೆ ಮರುಪರಿಶೀಲನೆ ಮಾಡಬೇಕು ಅಂತ ಯೋಚನೆ ಮಾಡಿದ್ದೇವೆ. ಇಲ್ಲಿಯವರೆಗೆ ಕೆಲವು ಅಂಶಗಳನ್ನ ಮಾತ್ರ ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಮುಖ್ಯವಾದ ಕೆಲ ಅಂಶಗಳನ್ನ ಪರಿಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ ಮತ್ತೆ ಪುನರ್ ಪರಿಶೀಲನೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.
”ಪೊಲೀಸ್ ಇಲಾಖೆಯಲ್ಲಿ ಕನಿಷ್ಠ 70% ಸಿಬ್ಬಂದಿಗಳಿಗೆ ವಸತಿ ಒದಗಿಸಲು ತೀರ್ಮಾನ ಮಾಡಿದ್ದೇವೆ. ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪೊಲೀಸರ ಕುಟುಂಬಗಳು ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಿದ್ದೇವೆ. ಹಣಕಾಸಿನ ಸಚಿವರು ಸಿಎಂ ಸಿದ್ದರಾಮಯ್ಯ ಇದಕ್ಕೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ” ಎಂದರು.