ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ಅ. 30ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ)ಯ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಎತ್ತಿ ಹಿಡಿದಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧ ಹೊಸದಿಲ್ಲಿಯಲ್ಲಿ ಇಂದು (ನ.3) ನಡೆದ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸಿಡಬ್ಲ್ಯೂಆರ್ಸಿ ನೀಡಿದ್ದ ಆದೇಶಕ್ಕೆ ಮನ್ನಣೆ ನೀಡಲಾಗಿದೆ.
ಅಕ್ಟೋಬರ್ 30ರಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ತಮಿಳುನಾಡಿಗೆ ನವೆಂಬರ್ 15ರವರೆಗೆ ನಿತ್ಯವೂ 2,600 ಕ್ಯೂಸೆಕ್ ನೀರು ಹರಿಸಲು ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ನೀಡಿದ್ದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯೂಎಂಎ) ಎತ್ತಿ ಹಿಡಿದಿದೆ.
ಕಾವೇರಿ ನಿರ್ವಹಣಾ ಪ್ರಾಧಿಕಾರ ಸಭೆಯ ಬಳಿಕ ಮಾಹಿತಿ ನೀಡಿರುವ ಎಸಿಎಸ್ ರಾಕೇಶ್ ಸಿಂಗ್, “ನವೆಂಬರ್ 23 ರ ತನಕ 2600 ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಆದೇಶಿಸಿದೆ. ತಮಿಳುನಾಡು 13,000 ಕ್ಯೂಸೆಕ್ ನೀರು ಬಿಡಲು ಆಗ್ರಹಿಸಿತ್ತು” ಎಂದು ತಿಳಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಈ ಮುಂಚಿನ ಆದೇಶದಂತೆ ರಾಜ್ಯವು ಸದ್ಯ ತಮಿಳುನಾಡಿಗೆ ಅಕ್ಟೋಬರ್ 31 ವರೆಗೂ ನಿತ್ಯ 3000 ಕ್ಯೂಸೆಕ್ ನೀರು ಹರಿಸುತ್ತಿದೆ.
ಸದ್ಯದ ಆದೇಶದಂತೆ ನವೆಂಬರ್ 15ವರೆಗೂ ರಾಜ್ಯದಿಂದ ತಮಿಳುನಾಡಿಗೆ ಪ್ರತಿದಿನವೂ 2,600 ಕ್ಯೂಸೆಕ್ ನೀರು ಹರಿಸಬೇಕು. ಕಾವೇರಿ ನದಿ ಪಾತ್ರದ ಎಲ್ಲ ನಾಲ್ಕು ಜಲಾಶಯಗಳಿಗೆ ಒಳಹರಿವು ಬಹುತೇಕ ಶೂನ್ಯವಾಗಿದೆ. ಈ ಸ್ಥಿತಿಯಲ್ಲಿ ಸಿಡಬ್ಲ್ಯೂಎಂಎ ನಿರ್ಣಯ ಕರ್ನಾಟಕದ ಪಾಲಿಗೆ ಆತಂಕ ಹೆಚ್ಚಿಸಿದೆ.