ಸಮಾಜದಲ್ಲಿ ಕಾಲ ಕಾಲಕ್ಕೆ ನಡೆಯುವ ವಿವಿಧ ರೀತಿಯ ಅಪರಾದಗಳನ್ನು ತಡೆಗಟ್ಟಲು ಕಾನೂನಿನ ಅರಿವು ಮುಖ್ಯವಾಗಿದೆ. ಆದ್ದರಿಂದ ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾನೂನಿನ ಬಗ್ಗೆ ಅರಿವು ಹೊಂದಬೇಕು ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣ ಘಟಕದ ಸಂಯುಕ್ತಾಶ್ರದಲ್ಲಿ ಮಕ್ಕಳ ಕಾಯ್ದೆಗಳ ಕುರಿತು ಪೊಲೀಸ್ ತನಿಖಾಧಿಕಾರಿಗಳಿಗೆ ಮತ್ತು ‘ಅಕ್ಕ ಪಡೆ’ ವಿಶೇಷ ಪೊಲೀಸ್ ಘಟಕಕ್ಕೆ ಶುಕ್ರವಾರ ನಡೆದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
“ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮೂಲಭೂತ ತರಬೇತಿ ನೀಡುವ ಸಂದರ್ಭದಲ್ಲಿ ಕಾನೂನು ತರಬೇತಿ ಸಹ ನೀಡಲಾಗುತ್ತದೆ. ಆದರೆ ಸಮಾಜ ಬೆಳವಣಿಗೆ ಹೊಂದಿದ್ದಂತೆ ಅಪರಾಧದ ರೂಪವು ಬದಲಾಗುತ್ತದೆ. ಇವುಗಳನ್ನು ಮಟ್ಟ ಹಾಕಲು ಕಾನೂನಿನಲ್ಲಿಯು ಸಹ ತಿದ್ದುಪಡಿ ಮಾಡಲಾಗುತ್ತದೆ. ಅದರಲ್ಲಿಯೂ ಮುಖ್ಯವಾಗಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಪೋಕ್ಸೋ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದ ಅಕ್ಕ ಪಡೆಯ ಸಿಬ್ಬಂದಿಗಳು ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಅವರ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಯಾವ ರೀತಿಯ ಕ್ರಮ ವಹಿಸಬೇಕು ಎನ್ನುವ ಬಗ್ಗೆ ತಿಳಿಹೇಳಬೇಕು” ಎಂದರು.
“ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಬೇರೆ ಅಪರಾಧಗಳಲ್ಲಿ ಭಾಗಿಯಾಗದಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಬೇಕು. ಜಿಲ್ಲೆಯಲ್ಲಿ ಪೊಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ನಾವು ವ್ಯವಸ್ಥಿತವಾಗಿ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡಿದರೆ ಇಂತಹ ತರಬೇತಿ ಕಾರ್ಯಗಾರ ಮಾಡಿದಕ್ಕೂ ಸಾರ್ಥಕ ಭಾವನೆ ಮೂಡುತ್ತದೆ” ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ ಮಾತನಾಡಿ, “ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಯಿಂದ ಸಮನ್ವಯತೆಯಿಂದ ಕೆಲಸ ಮಾಡುತ್ತಿದೆ. ಮಹಿಳೆಯರ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಮೊದಲು ನೆನಪಾಗುವ ಇಲಾಖೆ ಎಂದರೆ ಅದು ಪೊಲೀಸ್ ಇಲಾಖೆ, ಸಾಕಷ್ಟು ಜನರಿಗೆ ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಒಂದು ಪ್ರತ್ಯೇಕ ಇಲಾಖೆ ಎಂಬುದರ ಅರಿವೇ ಇಲ್ಲ. ಆದ್ದರಿಂದ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ಸೇರಿ ಇನ್ನು ಹೆಚ್ಚಿನ ಸಮನ್ವಯತೆಯಿಂದ ಕೆಲಸ ಮಾಡಿದರೆ ಜಿಲ್ಲೆಯಲ್ಲಿ ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಬಹುದು” ಎಂದು ಹೇಳಿದರು.
ತರಬೇತಿ ಕಾರ್ಯಗಾರದಲ್ಲಿ ಮಕ್ಕಳ ಹಕ್ಕುಗಳ ಕುರಿತು ಎಡಿಜಿಪಿ ತರಬೇತಿ ಕಛೇರಿಯ ತರಬೇತುದಾರ ರೋಹಿತ ಸಿ.ಜಿ., ಹಾಗೂ ಗೌರಿಶಂಕರ ಅವರು ಉಪನ್ಯಾಸ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಡಿ. 24ಕ್ಕೆ ಶಾಹೀನ್ ಪ್ರತಿಭಾ ಅನ್ವೇಷಣೆ ಪರೀಕ್ಷೆ; ವಿಜೇತರಿಗೆ 1.40 ಲಕ್ಷ ರೂ. ವಿದ್ಯಾರ್ಥಿ ವೇತನ
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಜಿಯಾ ಬಳಬಟ್ಟಿ, ಡಿವೈಎಸ್ಪಿ ಶಿವನಗೌಡ ಪಾಟೀಲ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರುಗಳಾದ ಮಂಜುಳಾ, ಧನಲಕ್ಷ್ಮಿ ಪಾಟೀಲ್, ಸೇರಿದಂತೆ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.