ನಾನೂ ಕೂಡ ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಪ್ರಭಲ ಆಕಾಂಕ್ಷಿಯಾಗಿದ್ದೇನೆ. ಇನ್ನು ಬೇಳೂರು ಗೋಪಾಲಕೃಷ್ಣ ಕೂಡ ತಾವೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಅವರು ಹೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರಿ ಇರುವುದು ಹೈಕಮಾಂಡ್ಗೆ ಎಂದು ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಪಕ್ಷಕ್ಕಾಗಿ ದುಡಿದವರು ಯಾರು ಬೇಕಾದರು ಲೋಕಸಭೆ ಟಿಕೆಟ್ ಕೇಳಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಹೇಳಿದ್ದಾರೆ.
“ದಿನಕಳೆದಂತೆ ಕಾಂಗ್ರೆಸ್ ಬಲಗೊಳ್ಳುತ್ತಿದೆ. ಆಯನೂರು ಮಂಜುನಾಥ್, ಮಧು ಬಂಗಾರಪ್ಪ, ಶ್ರೀಕಾಂತ್ ಎಂ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಅವರೆಲ್ಲ ಸೇರ್ಪಡೆಯಿಂದಾಗಿ ಕಾಂಗ್ರೆಸ್ ಮತ್ತಷ್ಟು ಶಕ್ತಿಯುತವಾಗಿದೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಏಳಿಗೆಯನ್ನು ಸಹಿಸದೆ ಬಿಜೆಪಿಗರು ನಮ್ಮ ಸರ್ಕಾರ ಮತ್ತು ಸರ್ಕಾರದ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಆದರೆ, ನಮ್ಮ ಯೋಜನೆಗಳನ್ನು ಜನರು ಅಪ್ಪಿಕೊಂಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
“ಯಡಿಯೂರಪ್ಪನವರು ಕಾಂಗ್ರಸ್ ಸರ್ಕಾರದ ವಿರುದ್ದ ಮಾತನಾಡುತ್ತಿದ್ದಾರೆ. ಅವರನ್ನ ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ. ಅವರು ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಎಷ್ಟು ಹಣ ತಂದಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.