ಬೆಂಗಳೂರಿನಲ್ಲಿ ನಡೆದ ಒಕ್ಕಲಿಗರ ಸಂಘದ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಜಾರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವಿರೋಧ ವ್ಯಕ್ತಪಡಿಸಿರುವುದು ಖಂಡನೀಯ ಎಂದು ಜಾಗೃತಯುವ ಕ್ರಾಂತಿ ಪಡೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸಿದ್ದು ಬಿ.ಎಸ್ ಸೂರನಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಗುರುವಾರ ಒಕ್ಕಲಿಗರ ಸಂಘ ಹಾಗೂ ಸರ್ಕಾರದ ಕೆಲವು ಸಚಿವರು ಶಾಸಕರು ಹಾಗೂ ಸಮಾಜದ ಪ್ರಮುಖ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಯಾವುದೇ ಕಾರಣಕ್ಕೆ ಜಾತಿ ಗಣತಿ ಜಾರಿಯಾಗದಂತೆ ಸರ್ಕಾರದ ಮೇಲೆ ಡಿ.ಕೆ ಶಿವಕುಮಾರ್ ಒತ್ತಡ ಹೇರಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳ ಬಳಿ ಸಮಾಜದ ಮುಖಂಡರ ನಿಯೋಗದ ಮೂಲಕ ತೆರಳಿ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಲು ಮುಂದಾಗುವ ಮೂಲಕ ಅಹಿಂದ ವರ್ಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಕಾಂಗ್ರೆಸ್ ರಾಷ್ಟ್ರೀಯ ನಾಯಕರು ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸಿ, ಅಹಿಂದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದಾಗಿ ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ರಾಜ್ಯಾಧ್ಯಕ್ಷರೇ ಅವರ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್ ದ್ವೀಮುಖ ನೀತಿಯನ್ನು ಎತ್ತಿ ತೋರಿಸುತ್ತಿದೆ. ಈ ಹಿಂದೆ ಅಹಿಂದ ವರ್ಗದ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ತಾವೇ ಮಾಡಿಸಿರುವ ಜಾತಿ ಗಣತಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಉಪ ಮುಖ್ಯಮಂತ್ರಿಗಳು ಕರ್ನಾಟಕದ ಜನತೆಗೆ ಸಮಾನ ಹಕ್ಕನ್ನು ನೀಡುವಲ್ಲಿ ವಿಫಲವಾಗುತ್ತಿದ್ದಾರೆ ಎಂಬುದಕ್ಕೆ ಗುರುವಾರ ನಡೆದ ಸಭೆಯೇ ಸಾಕ್ಷಿಯಾಗಿದೆ. ಒಂದು ವೇಳೆ ರಾಜ್ಯದ ಅಹಿಂದ ವರ್ಗದ ಹಾಗೂ ಎಲ್ಲ ಜನರ ಹಿತಕ್ಕಿಂತ ಕೇವಲ ತಮ್ಮ ಸಮುದಾಯದ ಹಿತ ಬಯಸುವದಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.