- ‘ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಗೊಂದಲವಿಲ್ಲ’
- ‘ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ’
ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಗೊಂದಲವಿಲ್ಲ. ಸಿಎಂ ಬದಲಾವಣೆ ವಿಚಾರ ಕೇವಲ ಮಾಧ್ಯಮಗಳ ಸೃಷ್ಟಿ. ಈ ಕುರಿತು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
ಕೊಪ್ಪಳ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮಕ್ಕೆ ಬಂದಿರುವ ಅವರು ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದರು.
“ನಮ್ಮದು ರಾಷ್ಟ್ರೀಯ ಪಕ್ಷ. ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಯಾರಲ್ಲಿ ಏನೇ ವಿಚಾರವಿದ್ದರೂ ಪಕ್ಷದ ವೇದಿಕೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡಲು ಅವಕಾಶ ಇದೆ. ಮಾಧ್ಯಮಗಳ ಮುಂದೆ ಯಾವುದೇ ವಿಷಯ ಚರ್ಚೆ ಮಾಡಬಾರದು” ಎಂದರು.
“ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ. ಹೀಗಾಗಿ ಆ ಚರ್ಚೆ ಅನಗತ್ಯ. ಈ ರೀತಿ ಚರ್ಚೆ ಪಕ್ಷದ ಘನತೆ ಹಾಗೂ ಬಲ ಕುಂದುತ್ತದೆ. ಅವಕಾಶ ಯಾರಿಗೆ ಸಿಗುತ್ತದೆ ಅವರು ಸಿಎಂ ಆಗುತ್ತಾರೆ. ನಾವು ಬಯಸಿದರೆ ಸಿಎಂ ಆಗುವುದಿಲ್ಲ. ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಕೇಂದ್ರದ ನಾಯಕರು ನಿರ್ಧಾರ ಮಾಡಿದವರೇ ಸಿಎಂ ಆಗುತ್ತಾರೆ” ಎಂದು ಹೇಳಿದರು.
ಗ್ರಾಮ ನ್ಯಾಯಾಲಯ
“ನ್ಯಾಯದಾನಕ್ಕೆ ಬಲ ತುಂಬಲು ನಮ್ಮ ಸರಕಾರ ಬದ್ಧ. ಜನವರಿ 26 ರ ವೇಳೆಗೆ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯ ಸ್ಥಾಪನೆಗೆ ಸಿದ್ಧತೆ ಮಾಡಲಾಗಿದೆ. ಮುಖ್ಯ ನ್ಯಾಯಾಧೀಶರೊಂದಿಗೆ ಚರ್ಚಿಸಿ ಅಂತಿಮ ರೂಪರೇಷೆ ನೀಡಲಾಗುವುದು. ನ್ಯಾಯಾಲಯಗಳಿಗೆ ಮೂಲಭೂತ ಸೌಲಭ್ಯ ನೀಡಲು ಆದ್ಯತೆ ಕಲ್ಪಿಸಲಾಗುವುದು” ಎಂದು ಎಚ್ ಕೆ ಪಾಟೀಲ್ ಹೇಳಿದರು.