ಜಾತಿ ಆಧಾರದಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಜೊತೆಗೆ, ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆಂದು ಹೇಳುವುದೂ ಅನಾರೋಗ್ಯಕರ ಬೆಳವಣಿಗೆ ಎಂದು ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ವೈಯಕ್ತಿಕ ಸಾಧನೆ, ಯೋಗ್ಯತೆ, ಸಾಮಾಜಿಕ ಕಳಕಳಿ ಇರುವವರು ಮುಖ್ಯಮಂತ್ರಿಯಾಗಬೇಕು. ಜಾತಿ ಆಧಾರದ ಮೇಲೆ ಅವಕಾಶ ಪಡೆಯುವುದು ಪ್ರಜಾಪ್ರಭುತ್ವದ ಅಣಕ. ಪ್ರತಿ ರಾಜಕೀಯ ಕಾಲಘಟ್ಟದಲ್ಲಿ ತಿರುವುಗಳಿರುತ್ತವೆ. ಅದನ್ನು ಆಧರಿಸಿ ಸ್ಥಾನಗಳ ಬದಲಾವಣೆಯಾಗುತ್ತವೆ” ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರದಂದು ‘ನಾನೇ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಬಿಜೆಪಿ ಮುಖಂಡ ಎಸ್ ಎಂ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.