ಶಿಕ್ಷಣ ನೀತಿಯನ್ನು ರೂಪಿಸುವಾಗ ಭಾಷಾ ಪ್ರಶ್ನೆಗಳು, ಪ್ರಾದೇಶಿಕ ಪ್ರಶ್ನೆಗಳು, ಸ್ಕಿಲ್ ಪ್ರಶ್ನೆಗಳು, ಮೌಲ್ಯದ ಪ್ರಶ್ನೆಗಳು ಬಿಡಿಬಿಡಿಯಾಗಿ ಚರ್ಚೆಯಲ್ಲಿರುತ್ತವೆಯೇ ಹೊರತು ಶಿಕ್ಷಣದ ಮೂಲ ಉದ್ದೇಶ – ಸಂವಿಧಾನ ಉದ್ದೇಶಿಸಿರುವ ಸಮಾಜ ರೂಪಿಸುವ ಉದ್ದೇಶ- ಇಡಿಯಾಗಿ ಚರ್ಚೆಯಲ್ಲಿರುವುದೇ ಇಲ್ಲ.
ನಮ್ಮ ಸಂವಿಧಾನದ ಉದ್ದೇಶ ಜಾತ್ಯತೀತ, ಪ್ರಜಾಪ್ರಭುತ್ವ, ಸಮಾಜವಾದಿ ಸಮಾಜ ರೂಪಿಸುವುದು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗು ಮಾಧ್ಯಮಗಳು ಸಂವಿಧಾನ ಉದ್ದೇಶಿಸಿರುವ ಸಮಾಜವನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊಂದಿವೆ. ಈ ನಾಲ್ಕು ಅಂಗಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲರನ್ನೂ ಶಿಕ್ಷಣ ಸೃಷ್ಟಿಸುತ್ತದೆ.
ಶಾಸಕರನ್ನು, ನ್ಯಾಯಧೀಶರನ್ನು, ಅಧಿಕಾರಿಗಳನ್ನು, ಸುದ್ಧಿ ಮಾಡುವವರನ್ನು ಮತ್ತು ನಾಲ್ಕು ಅಂಗಗಳಲ್ಲಿ ದುಡಿಯುವ ಎಲ್ಲರನ್ನೂ ಶಿಕ್ಷಣ ಸೃಷ್ಟಿಸುತ್ತದೆ. ಅಷ್ಟು ಮಾತ್ರವಲ್ಲ ವೈದ್ಯ, ಎಂಜಿನಿಯರ್, ಉಪನ್ಯಾಸಕ, ಗುಮಾಸ್ತ, ಪೊಲೀಸರನ್ನು ಹೀಗೆ ಆಧುನಿಕ ಸಂಸ್ಥೆಗಳಲ್ಲಿ ದುಡಿಯುವ ಎಲ್ಲರನ್ನೂ ಶಿಕ್ಷಣ ಸೃಷ್ಟಿಸುತ್ತದೆ. ಇವರೆಲ್ಲರಿಗೆ ಜಾತ್ಯತೀತ, ಪ್ರಜಾಪ್ರಭುತ್ವ, ಸಮಾಜವಾದಿ ಸಮಾಜ ರೂಪಿಸಲು ಅವಶ್ಯವಿರುವ ಪರಿಣಿತಿ ಹಾಗು ಮೌಲ್ಯಗಳನ್ನು ನೀಡುವುದು ಶಿಕ್ಷಣದ ಕರ್ತವ್ಯ.
ಆದರೆ, ಸಂವಿಧಾನ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತ ಸರಕಾರಗಳು ಶಿಕ್ಷಣವನ್ನು ಈ ದೃಷ್ಟಿಯಿಂದ ನೋಡಿವೆಯೇ?
ಶಿಕ್ಷಣ ನೀತಿಯನ್ನು ರೂಪಿಸುವಾಗ ಭಾಷಾ ಪ್ರಶ್ನೆಗಳು, ಪ್ರಾದೇಶಿಕ ಪ್ರಶ್ನೆಗಳು, ಶಿಕ್ಷಣ ಸಂಸ್ಥೆಗಳ ಒಡೆತನ (ಪಬ್ಲಿಕ್ ವರ್ಸಸ್ ಪ್ರವೈಟ್), ಸ್ಕಿಲ್ ಪ್ರಶ್ನೆಗಳು, ಮೌಲ್ಯದ ಪ್ರಶ್ನೆಗಳು ಬಿಡಿಬಿಡಿಯಾಗಿ ಚರ್ಚೆಯಲ್ಲಿರುತ್ತವೆಯೇ ಹೊರತು ಶಿಕ್ಷಣದ ಮೂಲ ಉದ್ದೇಶ – ಸಂವಿಧಾನ ಉದ್ದೇಶಿಸಿರುವ ಸಮಾಜ ರೂಪಿಸುವ ಉದ್ದೇಶ- ಇಡಿಯಾಗಿ ಚರ್ಚೆಯಲ್ಲಿರುವುದೇ ಇಲ್ಲ.
ಶಿಕ್ಷಣದ ಸುಧಾರಣೆಯನ್ನು ಸಂವಿಧಾನವನ್ನು ಅನುಷ್ಠಾನಗೊಳಿಸಲು ಅವಶ್ಯವಿರುವ ಮಾನವ ಸಂಪನ್ಮೂಲದ ದೃಷ್ಟಿಯಿಂದ ನೋಡದಿರುವುದರಿಂದ ಶಿಕ್ಷಣ ಮತ್ತು ಇತರ ಆಧುನಿಕ ಸಂಸ್ಥೆಗಳಲ್ಲಿ ವಸಾಹತುಶಾಹಿ/ಊಳಿಗಮಾನ್ಯ ಮೌಲ್ಯಗಳ ಮಿಶ್ರಣಗಳು ಕಾರುಬಾರು ಮಾಡುತ್ತಿವೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ಎಲ್ಲ ಕಡೆಗಳಲ್ಲೂ ಸಂವಿಧಾನಿಕ ಮೌಲ್ಯಗಳ ಬದಲು ಬ್ರಾಹ್ಮಣ್ಯದ ಮೌಲ್ಯಗಳು ಕಾರಬಾರು ಮಾಡುತ್ತಿವೆ.
ಕೆಲವು ಪಕ್ಷಗಳು ನೇರವಾಗಿ ಬ್ರಾಹ್ಮಣ್ಯವನ್ನು ಪ್ರತಿಪಾದಿಸಿದರೆ ಇನ್ನೂ ಕೆಲವು ಲಿಬರಲ್ ಪಕ್ಷಗಳು ಪರೋಕ್ಷವಾಗಿ ಬ್ಯಾಹ್ಮಣ್ಯವನ್ನು ಪ್ರತಿಪಾದಿಸುತ್ತಿವೆ. ಬ್ರಾಹ್ಮಣ್ಯವನ್ನು ನೇರವಾಗಿ ಪ್ರತಿಪಾದಿಸುವ ಪಕ್ಷಗಳು ಶಿಕ್ಷಣ ನೀತಿಗಳನ್ನು, ಸಂಸ್ಥೆಗಳನ್ನು ಸಂಪೂರ್ಣವಾಗಿ ತಮ್ಮ ಪಾರ್ಟಿ ಅಜೆಂಡಾವನ್ನು ಜಾರಿಗೆ ತರಲು ಪೂರಕವಾಗಿ ರೂಪಿಸುತ್ತಿವೆ. ಲಿಬರಲ್ ಪಕ್ಷಗಳು ಶಿಕ್ಷಣ ನೀತಿಗಳನ್ನು ರೂಪಿಸುವಾಗ ಸಂವಿಧಾನವನ್ನು ಜಾರಿಗೊಳಿಸುವ ಮಾನವ ಸಂಪನ್ಮೂಲ ಸೃಷ್ಟಿಸುವುದಕ್ಕಿಂತ ಹೆಚ್ಚು ಮಾರುಕಟ್ಟೆಯಲ್ಲಿ ಬೇಡಿಕೆಯುಳ್ಳ ಮಾನವ ಸಂಪನ್ಮೂಲ ಸೃಷ್ಟಿಗೆ ಮಹತ್ವ ನೀಡುತ್ತಿವೆ. ಹೀಗೆ ಶಿಕ್ಷಣ ಸೋಲುತ್ತಿದೆ, ಆದುದರಿಂದ ಸಂವಿಧಾನ ಸೋಲುತ್ತಿದೆ. ಸಂವಿಧಾನ ಸೋಲಬಾರದೆಂದಾದರೆ ಸಂವಿಧಾನ ಉದ್ದೇಶಿಸಿರುವ ಸಮಾಜ ನಿರ್ಮಿಸುವ ಮಾನವ ಸಂಪನ್ಮೂಲ ಸೃಷ್ಟಿ ಶಿಕ್ಷಣದ ಉದ್ದೇಶ ಆಗಬೇಕು.

ಪ್ರೊ ಚಂದ್ರ ಪೂಜಾರಿ
ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ