ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವುದಕ್ಕೆ ಮಾಜಿ ಸಚಿವ ಹಾಗೂ ಶಾಸಕ ಪ್ರಭು.ಬಿ ಚವ್ಹಾಣ ಹರ್ಷ ವ್ಯಕ್ತಪಡಿಸಿದ್ದು, ತುರ್ತಾಗಿ ಬರ ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
“ಈ ಹಿಂದೆ ಸರ್ಕಾರವು ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದಾಗ ಔರಾದ ಹಾಗೂ ಕಮಲನಗರ ತಾಲ್ಲೂಕುಗಳನ್ನು ಕಡೆಗಣಿಸಲಾಗಿತ್ತು. ಮುಂಗಾರು ಹಂಗಾಮಿನಲ್ಲಿ ಮಳೆಯ ತೀವ್ರ ಕೊರತೆಯಾಗಿ ಕ್ಷೇತ್ರದ ರೈತರು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಸಕಾಲಕ್ಕೆ ಮಳೆಯಾಗದೇ ಇರುವುದರಿಂದ ರೈತರು ಎರಡೆರೆಡು ಬಾರಿ ಬಿತ್ತನೆ ಮಾಡಿದ್ದರು. ನಂತರದ ದಿನಗಳಲ್ಲಿಯೂ ಮಳೆ ಕೊರತೆಯಾಗಿದ್ದರಿಂದ ಫಸಲು ಸರಿಯಾಗಿ ಅಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ” ಎಂದಿದ್ದಾರೆ.
“ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರನ್ನು ಪದೇ ಪದೇ ಭೇಟಿಯಾಗಿ ಕ್ಷೇತ್ರದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ. ತೀವ್ರ ಬರಗಾಲ ಸಮಸ್ಯೆಯಿರುವ ಔರಾದ ಹಾಗೂ ಕಮಲನಗರ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕೆಂದು ಒತ್ತಾಯಿಸಿದ್ದೆ. ಇದರ ಫಲವಾಗಿ ಕ್ಷೇತ್ರದ ಎರಡೂ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ” ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಗೆ 4.5 ಕೋಟಿ ಅನುದಾನ ಸಾಲುವುದಿಲ್ಲ:
“ಕ್ಷೇತ್ರವನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವುದಕ್ಕೆ ರೈತರು ತಕ್ಷಣ ಸರ್ಕಾರದಿಂದ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪಟ್ಟಿಯಲ್ಲಿಯೇ ಔರಾದ ಹಾಗೂ ಕಮಲನಗರ ತಾಲ್ಲೂಕುಗಳನ್ನು ಸೇರಿಸಬೇಕಿತ್ತು. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಕ್ಷೇತ್ರದಲ್ಲಿ ಬರ ಪರಿಸ್ಥಿಯಿಂದಾಗಿ ರೈತರು ಸಾಕಷ್ಟು ಸಮಸ್ಯೆ ಅನುಭವಿಸಿದ್ದಾರೆ. ಜಿಲ್ಲೆಗೆ 4.5 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿಯೂ ತಾರತಮ್ಯವಾಗಿದೆ. ಈ ಅನುದಾನ ಸಾಲುವುದಿಲ್ಲ. ಇನ್ನಷ್ಟು ಅನುದಾನ ಬಿಡುಗಡೆ ಮಾಡಬೇಕೆಂದು ತಿಳಿಸಿದ್ದು, ಇನ್ನೂ ವಿಳಂಬ ಮಾಡದೇ ಕೂಡಲೇ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕೆಂದು” ಶಾಸಕರು ಒತ್ತಾಯಿಸಿದ್ದಾರೆ.