ಶಿವಮೊಗ್ಗ ನಗರಕ್ಕೆ ಅಷ್ಟೇ ಅಲ್ಲದೆ, ಇಡೀ ಜಿಲ್ಲೆಯ ಜಾತ್ಯತೀತ ಜನತಾದಳ ಪಕ್ಷವನ್ನು ಉತ್ತುಂಗಕ್ಕೆ ಏರಿಸಿ, ತಾನು ಚುನಾವಣೆಯಲ್ಲಿ ಸೋತರೂ ಮೂವರು ಶಾಸಕರನ್ನು ಜಿಲ್ಲೆಯಲ್ಲಿ ಪಕ್ಷಕ್ಕಾಗಿ ತಂದಿದ್ದ ಜಿಲ್ಲಾಧ್ಯಕ್ಷ, ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಪ್ರಧಾನಿ ದೇವೇಗೌಡ ಅವರ ಆತ್ಮೀಯ, ಕುಟುಂಬಸ್ಥ ಎಂದೇ ಕರೆಸಿಕೊಳ್ಳುತ್ತಿದ್ದ, ಎಂ ಶ್ರೀಕಾಂತ್ ಅವರು ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು ಇಂದು ರಾಜಧಾನಿಯಿಂದ ಬೆಂಬಲಿಗರೊಂದಿಗೆ ಶಿವಮೊಗ್ಗಕ್ಕೆ ಬಂದು ಸದಸ್ಯತ್ವ ಸ್ವೀಕಾರ ಮಾಡಲು ಕಾಂಗ್ರೆಸ್ ಕಚೇರಿಗೆ ಬಂದ ಎಂ ಶ್ರೀಕಾಂತ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್ ಮತ್ತು ಅವರ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಮಾತನಾಡಿ, “ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದು, ರಾಜ್ಯದ ಎಲ್ಲ ಪಕ್ಷಗಳ ಮಾಜಿ ಮತ್ತು ಹಾಲಿ ಶಾಸಕರು ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ದಿನೇದಿನೆ ಕಾಂಗ್ರೆಸ್ ಬಲಯುತವಾಗಿ ಬೆಳೆಯುತ್ತಿದೆ. ಶ್ರೀಕಾಂತ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವುದು ಜಿಲ್ಲೆಗಷ್ಟೇ ಅಲ್ಲ. ರಾಜ್ಯಕ್ಕೆ ಇನ್ನಷ್ಟು ಬಲತಂದಿದೆ” ಎಂದು ಹೇಳಿದರು.
“ರಾಜ್ಯದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಾ ಕೋಮುಗಲಭೆಗಳಿಗೆ ಕಾರಣವಾದ ಬಿಜೆಪಿಯನ್ನು ರಾಜ್ಯದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಸಂಪೂರ್ಣ ನಾಶದತ್ತ ಸಾಗಿದೆ. ಮೋದಿ ಸುಳ್ಳಿನ ಕಂತೆಯನ್ನು ಜನ ಅರಿತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವು ನಿಶ್ಚಿತ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, “ಎಂ ಶ್ರೀಕಾಂತ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ. ಸಾವಿರಾರು ಭಾಷೆ ಮತ್ತು ಸಂಸ್ಕೃತಿ, ಧರ್ಮ ಉಳ್ಳ ಈ ದೇಶವನ್ನು ಕಾಂಗ್ರೆಸ್ ಒಟ್ಟಾಗಿ ತೆಗೆದುಕೊಂಡು ಬಂದಿದೆ. ಬಡವರು ಹಿಂದುಳಿದ ವರ್ಗಗಳ ಆಶೋತ್ತರಗಳನ್ನು ಈಡೇರಿಸಿದೆ. ನಾವು ಸುಮ್ಮನೆ ಭಾಷಣ ಮಾಡುತ್ತಾ ಕುಳಿತರೆ ಆಗುವುದಿಲ್ಲ. ಪ್ರತಿಯೊಬ್ಬ ಮತದಾರನ ಮನೆ, ಮನ ತಲುಪಬೇಕು. ಅವರನ್ನು ಕಾಂಗ್ರೆಸ್‌ನತ್ತ ಸೆಳೆಯಬೇಕು” ಎಂದರು.
“ನಮ್ಮ ಪಕ್ಷದ ಸಿದ್ದಾಂತ ಮತ್ತು ಧ್ಯೇಯಗಳನ್ನು ಮನವರಿಕೆ ಮಾಡಬೇಕು. ಆಗ ನಮ್ಮ ಮುಂದಿನ ಗೆಲುವಿಗೆ ಸುಲಭವಾಗುತ್ತದೆ. ಹಲವು ಪಕ್ಷದ ಮುಖಂಡರು ಸಾಗರೋಪಾದಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ” ಎಂದರು.
ಸಚಿವ ಮಧು ಬಂಗಾರಪ್ಪ ಮಾತನಾಡಿ, “ಶಿವಮೊಗ್ಗ ನಗರ ಸೇರಿದಂತೆ ಜಿಲ್ಲಾದ್ಯಂತ ಎಂ ಶ್ರೀಕಾಂತ್ ಅಪಾರ ಜನಮನ್ನಣೆ ಗಳಿಸಿದ್ದಾರೆ. ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವುದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ
ಎಂ ಶ್ರೀಕಾಂತ್ ಅವರು ರಾಜಕೀಯದ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಬಡವರಪರ ತುಡಿತ ಹೊಂದಿದವರು. ಕಾರ್ಮಿಕ ವಲಯ, ಶ್ರಮಿಕ ವಲಯ ಹೀಗೆ ಎಲ್ಲರ ಏಳಿಗೆಗೂ ಶ್ರಮಿಸುವ ಮನೋಭಾವ ಹೊಂದಿದ್ದಾರೆ. ಅವರ ಸೇರ್ಪಡೆಯಿಂದಾಗಿ ಕಾಂಗ್ರೆಸ್‌ಗೆ ಹೊಸ ಚೈತನ್ಯ ಸಿಗಲಿದೆ” ಎಂದರು.
ಆರ್ ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್, ಹೆಚ್ ಸಿ ಯೋಗೇಶ್, ಆರ್ ಎಂ ಮಂಜುನಾಥ ಗೌಡ, ಶಿವಕುಮಾರ್, ವೈ ಹೆಚ್ ನಾಗರಾಜ್, ಎನ್ ರಮೇಶ್, ದೇವೇಂದ್ರಪ್ಪ, ಗಿರೀಶ್, ಕಲಿಂ ಪಾಶಾ, ವಿಶ್ವನಾಥ್ ಕಾಶಿ, ರಂಗನಾಥ್, ಹಾಗೂ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರ್ಪಡೆಗೊಂಡ ನಾಗರಾಜ್ ಕಂಕಾರಿ ಸೇರಿದಂತೆ ನೂರಾರು ಬೆಂಬಲಿಗರು ಇದ್ದರು.