ಕರ್ನಾಟಕ ಶಾಲಾ ಪರೀಕ್ಷೆ ಮತ್ತು ನಿರ್ಣಯ ನಡೆಸುತ್ತಿರುವ ಮಾರ್ಚ್ 2024ರ ದ್ವೀತಿಯ ಪಿಯುಸಿ ಪರೀಕ್ಷೆಗೆ ಖಾಸಗಿಯಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ, ರಾಜ್ಯದ ಎಲ್ಲ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಾತ್ರ ನೊಂದಾಯಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದಾರೆ.
ಸರ್ಕಾರದ ಆದೇಶದಲ್ಲಿರುವ ಸೂಚನೆಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಭ್ಯರ್ಥಿಯು ತನ್ನ ವಾಸಸ್ಥಾನಕ್ಕೆ ಹತ್ತಿರವಾಗುವ ಅಥವಾ ಉದ್ಯೋಗ ಮಾಡುವ ಸ್ಥಳಕ್ಕೆ ಸಮೀಪದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾತ್ರ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮತದಾರ ಗುರುತಿನ ಚೀಟಿ, ಪಡಿತರ ಚೀಟಿ, ಬ್ಯಾಂಕ್ ಖಾತೆಯ ಪಾಸ್ ಬುಕ್, ಡ್ರೈವಿಂಗ್ ಲೈಸೆನ್ಸ್ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ನೀಡುವಂತೆ ತಿಳಿಸಿದೆ. ಆದರೆ ಈ ನಿಯಮಗಳೇ ಈಗ ಹೊರಜಿಲ್ಲೆಯಿಂದ ಬಂದು ಉಡುಪಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮುಳುವಾಗಿದೆ.
ಪ್ರಥಮ ಪಿಯುಸಿಯನ್ನು ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತ ಅದಿತಿ ಎಂಬ ವಿದ್ಯಾರ್ಥಿನಿಗೆ ಆಧಾರ್ ಕಾರ್ಡ್‌ನಲ್ಲಿ ಕಾರ್ಕಳದ ವಿಳಾಸವಿದೆ ಎಂಬ ಕಾರಣಕ್ಕೆ, ತಮ್ಮದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿನಿಗೆ ಖಾಸಗಿಯಾಗಿ ನೋಂದಾಯಿಸಲು ಅವಕಾಶ ನಿರಾಕರಿಸಿದ್ದಾರೆ.
ರಕ್ಷಿತಾ ಯಲ್ಲಪ್ಪಾ ಮಾದರ್ ಎಂಬ ವಿದ್ಯಾರ್ಥಿನಿಯು ಕಳೆದ 10 ವರ್ಷದಿಂದ ಉಡುಪಿಯಲ್ಲಿ ಪೋಷಕರೊಂದಿಗೆ ವಾಸವಿದ್ದಾರೆ. ಪ್ರಥಮ ಪಿಯುಸಿಯನ್ನು ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಭ್ಯಸಿಸಿದ್ದು, ಈಗ ಖಾಸಗಿಯಾಗಿ ಪರೀಕ್ಷೆ ಬರೆಯಲು ಅದೇ ಕಾಲೇಜಿನಲ್ಲಿ ನೊಂದಾಯಿಸಲು ತೆರಳಿದಾಗ, ಆಧಾರ್ ಕಾರ್ಡ್‌ನಲ್ಲಿ ಬೆಳಗಾವಿ ಜಿಲ್ಲೆಯ ವಿಳಾಸವಿದೆ ಎಂದು ನೋಂದಣಿಗೆ ಅವಕಾಶ ನೀಡಿಲ್ಲ.
ವಿದ್ಯಾರ್ಥಿ ಶರತ್ ಕುಮಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಳೆದ ವರ್ಷ ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇವರ ಆಧಾರ್ ಕಾರ್ಡ್‌ನಲ್ಲಿ ಸೊರಬ ತಾಲೂಕಿನ ವಿಳಾಸವಿದೆ. ಆರನೇ ತರಗತಿಯಿಂದ ಪ್ರಥಮ ಪಿಯುಸಿವರೆಗೆ ಒಂದೇ ಆವರಣದಲ್ಲಿ ಬ್ರಹ್ಮಾವರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಈಗ ಖಾಸಗಿಯಾಗಿ ಪರೀಕ್ಷೆ ಬರೆಯಲು, ಸೊರಬಕ್ಕೆ ಹೋಗಬೇಕೆಂದು ಪ್ರಾಂಶುಪಾಲರು ತಿಳಿಸಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಉಮೇಶ್ ವಿ ನಾಯ್ಕ್ ಮಾತನಾಡಿ, “ಚೇರ್ಕಾಡಿ, ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯಬಾರದೆಂಬ ಮಹತ್ವಕಾಂಕ್ಷೆಯೊಂದಿಗೆ ಶಿಕ್ಷಣ ಸಚಿವರು ಮಹತ್ತರ ಬದಲಾವಣೆಯನ್ನು ತರಲು ಶ್ರಮಿಸುತ್ತಿದ್ದಾರೆ. ಆದರೆ ಆದೇಶ ಪ್ರತಿಯಲ್ಲಿನ ಸೂಚನೆಗಳನ್ನು ತಮಗೆ ತೋಚಿದಂತೆ ಅರ್ಥ ಮಾಡಿಕೊಂಡು, ಕೆಲವು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಪರೀಕ್ಷೆ ನೋಂದಾವಣಿಗೆ ಅವಕಾಶ ನೀಡುತ್ತಿಲ್ಲ. ಶುಲ್ಕ ಕಟ್ಟಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ಅವಧಿ ಮುಕ್ತಾಯಗೊಂಡಿದ್ದು, ದಂಡವನ್ನು ಕಟ್ಟಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಕೆಲವೇ ದಿನಗಳು ಬಾಕಿ ಇವೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಶೀಘ್ರವಾಗಿ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಪ್ರೇಯಸಿ ಹೊರ ಬಂದಿಲ್ಲವೆಂದು ಪಿಜಿಗೆ ಕಲ್ಲೆಸೆದ ಯುವಕ
ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ತಾಂತ್ರಿಕ ತೊಡಕುಗಳೇನಿದೆ ಎಂಬುದನ್ನು ಪರಿಶೀಲಿಸುತ್ತೇನೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರತಿಕ್ರಿಯಿಸಿದರು.

ಅದೇ ಸಮಸ್ಯೆ ಆಗಿದೆ, ಭಾಷಾ ಆಯ್ಕೆಯಲ್ಲಿ ಅವಕಾಶ ಕೆಲವು ಕಾಲೇಜಿನವರು ಅವಕಾಶ ಕಲ್ಪಿಸುತ್ತಿಲ್ಲ . ಇದರಿಂದ ಬಹಳಷ್ಟು ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ
Iti pass madida student galu exam kattuvudu yavaga sir