ಜಾತಿ ಗಣತಿಯನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿರೋಧಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, “ಆದರೆ ಕಸರತ್ತನ್ನು ನಡೆಸುವ ಬಗ್ಗೆ ಸೂಕ್ತ ಚರ್ಚೆ ಮತ್ತು ಸಮಾಲೋಚನೆಯನ್ನು ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದೂ ತಿಳಿಸಿದ್ದಾರೆ.
“ನಮ್ಮದು ರಾಷ್ಟ್ರೀಯ ರಾಜಕೀಯ ಪಕ್ಷವಾಗಿದ್ದು, ಮತ ಬ್ಯಾಂಕ್ ರಾಜಕೀಯಕ್ಕೆ ಹೋಗುವುದಿಲ್ಲ” ಎಂದಿರುವ ಅವರು, “ಈ ವಿಷಯದ ಬಗ್ಗೆ ಎಲ್ಲರೊಂದಿಗೆ ವ್ಯಾಪಕವಾದ ಸಮಾಲೋಚನೆಯ ನಂತರವೇ ನಾವು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಕೇವಲ ಚುನಾವಣೆ ಗೆಲ್ಲಲು ಜಾತಿ ಗಣತಿಯನ್ನು ಬಳಸುವುದು ಸರಿಯಲ್ಲ” ಎಂದಿದ್ದಾರೆ.
ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಆಡಳಿತಾರೂಢ ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಸೆಡ್ಡು ಹೊಡೆಯಲು ವಿರೋಧ ಪಕ್ಷಗಳು ರಾಷ್ಟ್ರವ್ಯಾಪಿ ಜಾತಿ ಗಣತಿಗೆ ಒತ್ತಾಯಿಸುತ್ತಿರುವ ಈ ಸಮಯದಲ್ಲಿ ಅಮಿತ್ ಶಾ ಈ ಹೇಳಿಕೆಗಳು ಹೊರಬಿದ್ದಿವೆ.
ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯ ಭಾಗವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಇತರ ಸಮುದಾಯಗಳ ವಿಚಾರದಲ್ಲಿ ಇಂತಹ (ಜಾತಿ ಗಣತಿ) ಕಸರತ್ತನ್ನು ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಬಿಜೆಪಿ ಸರ್ಕಾರ ಹೇಳಿತ್ತು. ಇದಾದ ಬಳಿಕ ಬಿಹಾರ ಸರ್ಕಾರ ಜನವರಿಯಲ್ಲಿ ಜಾತಿ ಸಮೀಕ್ಷೆಯನ್ನು ಪ್ರಾರಂಭಿಸಿತ್ತು.
ಈ ಸಮೀಕ್ಷೆಯಲ್ಲಿ ಕಂಡುಕೊಂಡ ಸಂಗತಿಗಳನ್ನು ಬಿಹಾರ ಸರ್ಕಾರವು ಅಕ್ಟೋಬರ್ 2 ರಂದು ಬಿಡುಗಡೆ ಮಾಡಿದೆ. ಇತರ ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ಜಾತಿಗಳು ರಾಜ್ಯದ ಜನಸಂಖ್ಯೆಯಲ್ಲಿ ಶೇ. 63ಕ್ಕಿಂತ ಹೆಚ್ಚು ಇದ್ದಾರೆ ಎಂದು ಬಿಹಾರದ ಜಾತಿ ಗಣತಿ ಬಹಿರಂಗಪಡಿಸಿದೆ.
ರಾಷ್ಟ್ರಮಟ್ಟದಲ್ಲಿ ಮೈತ್ರಿಯನ್ನು ಮಾಡಿಕೊಂಡಿರುವ ಜೆಡಿಯು, ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಬಿಹಾರದಲ್ಲಿ ಅಧಿಕಾರ ನಡೆಸುತ್ತಿವೆ. ಜಾತಿ ಗಣತಿಯಿಂದಾಗಿ ಇತರ ಹಿಂದುಳಿದ ವರ್ಗಗಳು ಮತ್ತು ಇತರ ಜಾತಿಗಳ ನಿಜವಾದ ಜನಸಂಖ್ಯೆಯನ್ನು ತಿಳಿಯಲು ಸಹಕಾರಿಯಾಗುತ್ತದೆ ಮತ್ತು ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಲು ಸಾಧ್ಯವಾಗುತ್ತದೆ ಎಂದು ಮೈತ್ರಿ ಪಕ್ಷಗಳು ಹೇಳುತ್ತಿವೆ.
ಇದನ್ನೂ ಓದಿರಿ: ತನ್ನ ಗೋರಿಯನ್ನು ತಾನೇ ತೋಡಿಕೊಂಡ ಜಾತ್ಯತೀತ ಜನತಾದಳ: ಒಂದು ಅವಲೋಕನ
ಅಕ್ಟೋಬರ್ 9 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಪಕ್ಷವು ಜಾತಿಗಣತಿಯ ಕುರಿತು ವಿಶೇಷ ಘೋಷಣೆಯನ್ನು ಮಾಡಿದೆ. “ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸಲಾಗುವುದು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಜಾತಿ ಗಣತಿ ಕೈಗೊಳ್ಳಲಾಗುವುದು” ಎಂದು ಕಾಂಗ್ರೆಸ್ ಭರವಸೆ ನೀಡಿದೆ. ಜಾತಿಗಣತಿ ನಡೆಸಲು ಕಳೆದ ಆಗಸ್ಟ್‌ನಲ್ಲಿಯೇ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ.
ರಾಷ್ಟ್ರವ್ಯಾಪಿ ಜಾತಿ ಗಣತಿಗೆ ಒತ್ತಾಯಿಸಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ಕಳೆದ ತಿಂಗಳು ವಾಗ್ದಾಳಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, “ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿಮೆ ಮಾಡಲು ಕಾಂಗ್ರೆಸ್ ಬಯಸುತ್ತದೆಯೇ?” ಎಂದು ಪ್ರಶ್ನಿಸಿದ್ದರು. ಆದರೆ ಅಮಿತ್ ಶಾ ಅವರು “ಬಿಜೆಪಿಯು ಜಾತಿ ಗಣತಿಯನ್ನು ವಿರೋಧಿಸುವುದಿಲ್ಲ” ಎಂದಿದ್ದಾರೆ.
ಬಿಹಾರದ ಮಹಾ ಘಟಬಂಧನ್ ಸರ್ಕಾರ ಜಾತಿ ಗಣತಿ ಪ್ರಕಟ ಮಾಡಿದ ಬಳಿಕ ಬಿಹಾರದ ಬಿಜೆಪಿ ಘಟಕ ಸ್ವಾಗತಿಸಿದರೂ ರಾಷ್ಟ್ರೀಯ ಮಟ್ಟದ ಕೆಲವು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದರು. ಜಾತಿ ಗಣತಿಯನ್ನು ನೇರವಾಗಿ ಉಲ್ಲೇಖಿಸದಿದ್ದರೂ ಪ್ರಧಾನಿ ಮೋದಿ ಈ ಕುರಿತು ಆಕ್ರಮಣಕಾರಿಯಾಗಿಯೇ ಪ್ರತಿಕ್ರಿಯಿಸಿದ್ದರು. “ಮೊದಲು ದೇಶದ ಜನರ ಭಾವನೆಗಳ ಜೊತೆಯಲ್ಲಿ ಆಟವಾಡಿ ಜಾತಿ ಹೆಸರಲ್ಲಿ ದೇಶವನ್ನು ಒಡೆದರು, ಈಗಲೂ ಈ ಮಹಾಪಾಪವನ್ನು ಮಾಡುತ್ತಿದ್ದಾರೆ. ಜಾತಿಯ ಹೆಸರಲ್ಲಿ ದೇಶ ವಿಭಜಿಸಲು ಯತ್ನಿಸುತ್ತಿದ್ದಾರೆ” ಎಂದಿದ್ದರು.