ಚಿಕಿತ್ಸೆಗಾಗಿ ಗದಗದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಈಗ ಅಕ್ಷರಶಃ ಕಂಗಾಲಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ, ಔಷಧಿ ಸಿಗುತ್ತೆಂದು ಬಂದ ರೋಗಿಗಳಿಗೆ ಇಲ್ಲಿನ ಸಿಬ್ಬಂದಿ ‘ಈ ಔಷಧಿಗಳು ನಮ್ಮಲ್ಲಿ ಇಲ್ಲ’ ಎನ್ನುತ್ತಿದ್ದು, ಬಡ ರೋಗಿಗಳು ಖಾಸಗಿ ಔಷಧಿ ಅಂಗಡಿಯಲ್ಲಿ ಖರೀದಿ ಮಾಡುವಂತಾಗಿದೆ.
ರೋಗಿಗಳಿಗೆ ಅಗತ್ಯ ಔಷಧಿಯನ್ನು ವೈದ್ಯರು ಚೀಟಿ ಬರೆದುಕೊಡುತ್ತಾರೆ. ರೋಗಿಗಳು ಜಿಮ್ಸ್ ಆಸ್ಪತ್ರೆ ಔಷಧಾಲಯಕ್ಕೆ ಹೋದರೆ, ಈ ಔಷಧಿ ನಮ್ಮಲ್ಲಿ ಇಲ್ಲ, ಹೊರಗಡೆ ಹೋಗಿ ಎನ್ನುತ್ತಿದ್ದಾರಂತೆ. ಕಡಿಮೆ ದರದ ಔಷಧಿಗಳು ಜಿಮ್ಸ್ ಆಸ್ಪತ್ರೆಯಲ್ಲಿ ದೊರೆಯುತ್ತವೆ. ಆದರೆ, ದುಬಾರಿ ಬೆಲೆಯ ಅತಿ ಅಗತ್ಯದ ಔಷಧಿ, ಇಂಜೆಕ್ಷನ್ಗಳು ಸಿಗುತ್ತಿಲ್ಲ ಎಂದು ರೋಗಿಗಳು ಕಿಡಿ ಕಾರುತ್ತಿದ್ದಾರೆ. ಚರ್ಮ ರೋಗಿಯೊಬ್ಬ ಒಂದೊಂದು ಮುಲಾಮಿಗೆ 300-400 ರೂಪಾಯಿ ಕೊಟ್ಟು ಖಾಸಗಿಯಲ್ಲಿ ಖರೀದಿ ಮಾಡಬೇಕಾಗಿದೆ. ಬಡವರು ಸರ್ಕಾರಿ ಆಸ್ಪತ್ರೆಯಲ್ಲಿ ಫ್ರೀ ಚಿಕಿತ್ಸೆ, ಔಷಧಿ ಸಿಗುತ್ತೆ ಎಂದು ಬಂದ್ರೆ ಔಷಧಿಯೇ ಸಿಗುತ್ತಿಲ್ಲ. ಹಣ ಕೊಟ್ಟು ಖರೀದಿ ಮಾಡುವಂತ ಸ್ಥಿತಿ ಇದೆಯೆಂದು ಗೋಳಾಡುತ್ತಿದ್ದಾರೆ.
ಈ ಕುರಿತು ಜಿಮ್ಸ್ ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ರೇಖಾ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ, “ನಮ್ಮ ಔಷಧಾಲಯದಲ್ಲಿ ಇದ್ದ ಔಷಧಿಗಳು ಮಾತ್ರ ಬರೆಯುವಂತೆ ವೈದ್ಯರಿಗೆ ಈಗಾಗಲೇ ಸೂಚಿಸಲಾಗಿದೆ. ಹೊರಗಡೆ ಮಾತ್ರೆ ಬರೆಯದಂತೆ ಲಿಖಿತವಾಗಿ ಹೇಳಲಾಗಿದೆ. ಆದರೂ, ಹೊರಗಡೆ ಬರೆದುಕೊಡುತ್ತಾರೆ ಎಂದರೆ, ನಿರ್ದೇಶಕರಿಗೆ ಕೇಳಬೇಕು. ಔಷಧಿ ಕೊರತೆ ಬಗ್ಗೆ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ನನ್ನ ಹಂತದಲ್ಲಿ ಏನು ಮಾಡಬಹುದೋ ಅದನ್ನು ಮಾಡಿದ್ದೇನೆ. ಮುಂದಿನದ್ದು ನಿರ್ದೇಶಕರದ್ದು,” ಎನ್ನುತ್ತಾರೆ.