“ಮೋದಿಜೀ ನೀವು ನನ್ನನ್ನು ಶೂಟ್ ಮಾಡಿ, ಕೇಜ್ರಿವಾಲ್ ಸಾಯುತ್ತಾರೆ, ಆದರೆ ನನ್ನ ದನಿ ಹತ್ತಿಕ್ಕಲಾರರಿ” ಎಂದಿದ್ದಾರೆ ದೆಹಲಿ ಸಿಎಂ.
ಭ್ರಷ್ಟಾಚಾರ ವಿರುದ್ಧದ ಪ್ರಧಾನಿ ನರೇಂದ್ರ ಮೋದಿಯವರ ಹೋರಾಟ ಕೇವಲ ’ನೌಟಂಕಿ’ (ನಾಟಕ) ಎಂದು ಎಎಪಿ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.
“ಯಾರನ್ನು ಬಿಜೆಪಿ ಟೀಕಿಸುತ್ತದೆಯೋ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಂತ್ರಿ ಸ್ಥಾನವನ್ನು ನೀಡುತ್ತದೆ” ಎಂದು ಕುಟುಕಿದ್ದಾರೆ.
ಹರಿಯಾಣದ ರೋಹ್ಟಕ್‌ನಲ್ಲಿ ನಡೆದ ಪಕ್ಷದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಯಾರಾದರೂ ದೊಡ್ಡ ಪಾಪ ಅಥವಾ ಅಪರಾಧ ಮಾಡಿ ಬಿಜೆಪಿಗೆ ಸೇರಿದರೆ, ಕೇಂದ್ರೀಯ ತನಿಖಾ ದಳ (ಸಿಬಿಐ) ಜಾರಿ ನಿರ್ದೇಶನಾಲಯ (ಇ.ಡಿ.) ಅಥವಾ ಆದಾಯ ತೆರಿಗೆ (ಐ.ಟಿ.) ಇಲಾಖೆಯ ಅಧಿಕಾರಿಗಳು ಎಂದಿಗೂ ಆ ವ್ಯಕ್ತಿಯನ್ನು ಮುಟ್ಟಲು ಧೈರ್ಯ ಮಾಡುವುದಿಲ್ಲ” ಎಂದಿದ್ದಾರೆ.
“ಭ್ರಷ್ಟರು ಯಾರು? ಭ್ರಷ್ಟರೆಂದರೆ ಇ.ಡಿ. (ಜಾರಿ ನಿರ್ದೇಶನಾಲಯ) ಮೂಲಕ ಕಂಬಿ ಎಣಿಸುವವರಲ್ಲ. ಇ.ಡಿ.ಗೆ ಹೆದರಿ ಬಿಜೆಪಿಗೆ ಸೇರಿದವರು ಭ್ರಷ್ಟರು, ಇ.ಡಿ.ಗೆ ಸಿಕ್ಕಿಬಿದ್ದು ಬಿಜೆಪಿಗೆ ಸೇರಿದವರು ಭ್ರಷ್ಟರು. ಇ.ಡಿ.ಯಿಂದಾಗಿ ಜೈಲಿಗೆ ಸೇರಿದವರು, ಪ್ರಾಮಾಣಿಕ ಧೈರ್ಯವಂತಾಗಿದ್ದಾರೆ. ಅವರು ಬಿಜೆಪಿಗೆ ಹೆದರುವುದಿಲ್ಲ. ಏಕೆಂದರೆ ಇಂದಲ್ಲ ನಾಳೆ, ಹೊರಬರುತ್ತೇವೆ ಎಂಬುದು ಅವರಿಗೆ ತಿಳಿದಿದೆ” ಎಂದು ತಿಳಿಸಿದ್ದಾರೆ.
“ಅಪ್ರಾಮಾಣಿಕತೆಯಲ್ಲಿ ತೊಡಗಿರುವವರಿಗೆ ಭಯವಿದೆ. ತಮ್ಮನ್ನು ಬಂಧಿಸಿದರೆ ಜೀವಾವಧಿಯವರೆಗೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ತಕ್ಷಣವೇ ಬಿಜೆಪಿಗೆ ಸೇರುತ್ತಾರೆಂದು ತಿಳಿದಿದೆ. ಹೀಗಾಗಿ ಯಾರು ಭ್ರಷ್ಟರು ಮತ್ತು ಯಾರು ಪ್ರಾಮಾಣಿಕರು ಎಂಬುದನ್ನು ಅರ್ಥಮಾಡಿಕೊಳ್ಳಿ” ಎಂದು ಮನವಿ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ದೆಹಲಿಯ ಅಬಕಾರಿ ನೀತಿ ಪ್ರಕರಣದ ವಿಚಾರಣೆಗೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಹೇಳಿಕೆ ದಾಖಲಿಸಲು ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಕೇಜ್ರಿವಾಲ್ ಅವರು ಇ.ಡಿ. ಮುಂದೆ ಹಾಜರಾಗಲಿಲ್ಲ. ಬದಲಿಗೆ ಇ.ಡಿ.ಗೆ ಪತ್ರ ಬರೆದು ತಮಗೆ ನೀಡಿದ ಸಮನ್ಸ್ ‘ಹಿಂತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು. “ಇದು ಅಸ್ಪಷ್ಟವಾಗಿದೆ. ಪ್ರೇರಿತವಾದದ್ದಾಗಿದೆ. ಇದು ಕಾನೂನಿನಲ್ಲಿ ಸಮರ್ಥನೀಯವಲ್ಲ” ಎಂದು ತಿಳಿಸಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕೇಜ್ರಿವಾಲ್, “ಅವರು ನನ್ನನ್ನು ಬಂಧಿಸುವುದಾಗಿ ಹೇಳುತ್ತಾರೆ. ನೀವು ನನ್ನನ್ನು ಬಂಧಿಸಬಹುದು ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ, ಆದರೆ ನೀವು ನನ್ನ ಧ್ವನಿಯನ್ನು ಹೇಗೆ ಹತ್ತಿಕ್ಕುತ್ತೀರಿ” ಎಂದು ಪ್ರಶ್ನಿಸಿದ್ದಾರೆ.
“ನೀವು ನನ್ನನ್ನು ಬಂಧಿಸಿ, ಮೋದಿಜೀ ನನ್ನನ್ನು ಶೂಟ್ ಮಾಡಿ, ಕೇಜ್ರಿವಾಲ್ ಸಾಯುತ್ತಾರೆ, ಆದರೆ ನಿಮ್ಮ ನಿದ್ದೆಯಲ್ಲೂ ನೀವು ನನ್ನ ಧ್ವನಿಯನ್ನು ಕೇಳುತ್ತೀರಿ. ನನ್ನ ಧ್ವನಿ ನಿಮ್ಮ ಕಿವಿಯಲ್ಲಿ ರಿಂಗಣಿಸುತ್ತದೆ, ನನ್ನ ಧ್ವನಿಯು ನಿಮ್ಮನ್ನು ಶಾಂತಿವಾಗಿ ಮಲಗಲು ಬಿಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿರಿ: ಉದ್ದೇಶಪೂರ್ವಕವಾಗಿ ಬಿಹಾರದ ಜನಗಣತಿಯಲ್ಲಿ ಮುಸ್ಲಿಂ, ಯಾದವರ ಸಂಖ್ಯೆ ಹೆಚ್ಚಳ: ಅಮಿತ್ ಶಾ