ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಕೆ ಎಸ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಆಕೆಯ ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕಾರು ಚಾಲಕ ಕಿರಣ್ ಎಂದು ಗುರುತಿಸಲಾಗಿದೆ. ಈತನು ಗುತ್ತಿಗೆಯ ಆಧಾರದ ಮೇಲೆ ಕಳೆದ ಐದು ವರ್ಷಗಳಿಂದ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ಈತನ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಚಾಲಕರಾಗಿದ್ದರು.
ಕಿರಣ್ ಎಂಬ ವ್ಯಕ್ತಿ ಈ ಹಿಂದೆ ಪ್ರತಿಮಾ ಅವರ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು. ಕೆಲ ವಿಚಾರಗಳಿಗೆ ಪ್ರತಿಮಾ ಮತ್ತು ಕಿರಣ್ ನಡುವೆ ಭಿನ್ನಾಭಿಪ್ರಾಯವಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಮಾ ಅವರು ಈತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದಕ್ಕೆ ಕೋಪಗೊಂಡು ಆತ ಪ್ರತಿಮಾ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರತಿಮಾ ಅವರ ಕೊಲೆಯಾದ ಬಳಿಕ ಕಿರಣ್ ಚಾಮರಾಜನಗರದ ಕಡೆಗೆ ಪರಾರಿಯಾಗುವ ವೇಳೆ, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, “ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಲವು ಜನರನ್ನು ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಆರೋಪಿಯ ಬಂಧನವಾಗಿಲ್ಲ. ತನಿಖೆ ಮುಂದುವರೆದಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆಗೆ ನುಗ್ಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯ ಬರ್ಬರ ಹತ್ಯೆ
ಏನಿದು ಪ್ರಕರಣ?
ಈ ಘಟನೆ ರಾಜ್ಯ ರಾಜಧಾನಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ರಾತ್ರಿ 7:30 ರ ಸುಮಾರಿಗೆ ಗಣಿ ಭೂವಿಜ್ಙಾನ ಇಲಾಖೆ ಉಪ ನಿರ್ದೇಶಕಿಯಾಗಿದ್ದ ಪ್ರತಿಮಾ ಅವರನ್ನು ಕೊಲೆ ಮಾಡಲಾಗಿತ್ತು.