ರಾಜ್ಯ ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿ ಹೊರವಲಯದ ಕೂಡ್ಲು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಚಿರತೆ ಪತ್ತೆಯಾಗಿತ್ತು. ಮೂರು ದಿನ ಕಳೆದರೂ ಚಿರತೆ ಪತ್ತೆಯಾಗಿರಲಿಲ್ಲ. ಆದರೆ, ಕೊನೆಯ ದಿನ ಚಿರತೆ ಸೆರೆ ಹಿಡಿಯುವ ವೇಳೆ, ಗುಂಡೇಟಿಗೆ ಸಾವನ್ನಪ್ಪಿತ್ತು. ಈ ಘಟನೆ ಬೆನ್ನಲ್ಲೇ ಇದೀಗ, ಅದೇ ಜಾಗದಲ್ಲಿ ಮತ್ತೊಂದು ಚಿರತೆ ಪತ್ತೆಯಾಗಿದೆ. ಜನರು ಮತ್ತೆ ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ನವೆಂಬರ್ 5ರ ರಾತ್ರಿ 10:30ರ ಸುಮಾರಿಗೆ ಚಿರತೆ ಕಂಡ ಬಗ್ಗೆ ತಬ್ರೇಜ್ ಎಂಬುವವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸದ್ಯ ಅರಣ್ಯಾಧಿಕಾರಿಗಳು ಚಿರತೆಯ ಹೆಜ್ಜೆಗುರುತು ಪತ್ತೆ ಮಾಡುತ್ತಿದ್ದಾರೆ.
ತಬ್ರೇಜ್ ಎಂಬುವವರು ಕೂಡ್ಲುಗೇಟ್ ಎಇಸಿಎಸ್ ಲೇವೇಟ್ ಹಾಗೂ ಎಂಎಸ್ ದೋನಿ ಸ್ಕೂಲ್ ಬಳಿ ಭಾನುವಾರ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಚಿರತೆ ಕಾಣಿಸಿಕೊಂಡಿದೆ. ಈ ಬಗ್ಗೆ ಅವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿರತೆ ಕಂಡು ಬಂದ ಪ್ರದೇಶದಲ್ಲಿ ಸಿಸಿಟಿವಿ ಇಲ್ಲದ ಕಾರಣ ಚಿರತೆ ಸೆರೆ ಹಿಡಿಯುವುದು ಕಷ್ಟವಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಕಲಿ ದಾಖಲೆ ಸೃಷ್ಟಿ ಮಾಡಿಕೊಡುತ್ತಿದ್ದ ಶ್ರೀಕೃಷ್ಣ ಕಂಪ್ಯೂಟರ್ ಅಂಗಡಿ ಮಾಲೀಕನ ಬಂಧನ
ಮತ್ತೊಂದು ಕಡೆ ಚಿರತೆ ಹೆಜ್ಜೆ ಗುರುತು ಪತ್ತೆ
ಇನ್ನು ಎಲೆಕ್ಟ್ರಾನಿಕ್ ಸಿಟಿ ಚಿಕ್ಕತೋಗೂರಿನಲ್ಲಿ ನವೆಂಬರ್ 4 ರಂದು ಸಂಜೆ 7.40ರ ಸುಮಾರಿಗೆ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ.
ಶನಿವಾರ ಸಂಜೆ ಚಿರತೆ ಮನೆ ಕಂಪೌಂಡ್ ಒಳಗೆ ನುಗ್ಗಿದೆ. ಬಾಗಿಲು ಬಳಿ ಬಂದ ಚಿರತೆ ಕಂಡು ಬಾಲಕ ಕಿರುಚಾಡಿದ್ದಾನೆ. ಬಾಲಕನ ಕಿರುಚಾಟಕ್ಕೆ ಚಿರತೆ ಓಡಿ ಹೋಗಿದೆ ಎಂದು ತಿಳಿದುಬಂದಿದೆ.
ಕೆ.ಆರ್.ಪುರಂ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಶೀಲನೆ ನಡೆಸಿ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶನಿವಾರ ಮಳೆ ಬಂದ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕತೋಗೂರು ಸುತ್ತಮುತ್ತ ನೈಸ್ ರಸ್ತೆ ಜಾಗದಲ್ಲಿ ಆಗಾಗ ಚಿರತೆ ಓಡಾಟ ಕಂಡುಬರುತ್ತಿದೆ.
ಎರಡೆರಡು ಕಡೆ ಚಿರತೆ ಪ್ರತ್ಯಕ್ಷ ದೂರು ಬಂದ ಹಿನ್ನೆಲೆ ಕೆ.ಆರ್ ಪುರಂ ಅರಣ್ಯ ಅಧಿಕಾರಿಗಳಿಗೆ ತಲೆ ನೋವು ಉಂಟಾಗಿದೆ. ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.