ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಪೆಟ್ಟಿಗೆಯಲ್ಲಿ ಇದ್ದದ್ದು ಅಡಿಗೆ ಉಪ್ಪು ಮತ್ತು ಕೆಲವು ತ್ಯಾಜ್ಯ ವಸ್ತುಗಳು ಎಂಬುದು ಖಚಿತವಾಗಿದೆ. ಆ ಬಗ್ಗೆ ಖಚಿತಪಡಿಸಿಕೊಂಡ ಬಳಿಕ ಅದನ್ನು ಸ್ಪೋಟಿಸಲಾಗಿದೆ ಎಂದು ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನವೆಂಬರ್ ೦3ರ ರಾತ್ರಿ ಸುಮಾರು 12:30ಕ್ಕೆ ವಾಹನದಲ್ಲಿ ಇಬ್ಬರು ಬಂದಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆ ಇಬ್ಬರನ್ನು ಪತ್ತೆ ಹಚ್ಚಲಾಗಿದೆ. ಮೇಲ್ನೋಟಕ್ಕೆ ಕ್ರಿಮಿನಲ್ ಹಿನ್ನೆಲೆ ಅನಿಸುತ್ತಿದ್ದು, ಮತ್ತಷ್ಟು ತನಿಖೆಮಾಡಿ ತಿಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಎರಡು ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿತ್ತು. ಹಲವು ಬಾರಿ ಪ್ರಯತ್ನಿಸಿದರೂ ಬಾಕ್ಸ್ ತೆರೆಯಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಸ್ಪೋಟಕ ಅಳವಡಿಸಿ ರಾತ್ರಿ 2.40ಕ್ಕೆ ಸ್ಪೋಟಿಸಿ ಒಂದು ಬಾಕ್ಸ್‌ನ ಬೀಗ ತೆರೆಯಲಾಗಿತ್ತು. ಅದರಲ್ಲಿ ಕೆಲವು ಪತ್ರಿಕೆಗಳು, ಬಿಳಿ ಬಣ್ಣದ ಪುಡಿ ಇರುವ ಪ್ಯಾಕೆಟ್ ದೊರಕಿತ್ತು. ರಾತ್ರಿ 3.24ಕ್ಕೆ ಮತ್ತೊಂದು ಬಾಕ್ಸ್ ತೆರೆದಾಗ, ಅದರಲ್ಲಿಯು ಪತ್ರಿಕೆ ಮತ್ತು ಬಿಳಿ ಬಣ್ಣದ ಪುಡಿ ಪತ್ತೆಯಾಗಿತ್ತು. ಪೆಟ್ಟಿಗೆ ಮತ್ತು ಬಿಳಿ ಬಣ್ಣದ ಪೌಡರ್ ಇರುವ ಚೀಲಗಳನ್ನು ಬಾಂಬ್ ನಿಷ್ಕ್ರಿಯ ದಳ ವಶಕ್ಕೆ ಪಡೆದು ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿತ್ತು.
ಮಳೆ ಹೆಚ್ಚಾಗಿದ್ದ ಕಾರಣ ಸ್ವಲ್ಪ ಸಮಯ ಕಾರ್ಯಾಚರಣೆ ವಿಳಂಬವಾಗಿದ್ದು, ಪುನಃ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಗೋಣಿ ಚೀಲದಿಂದ ಸುತ್ತಿರುವ ಕಬ್ಬಿಣದ ಬಾಕ್ಸ್ ಗಳ ಮೇಲೆ ಮೇಡ್ ಇನ್ ಬಾಂಗ್ಲಾದೇಶ, ಫುಡ್ ಗ್ರೇನ್ಸ್ ಎಂದು ಬರೆಯಲಾಗಿದೆ. ಸರ್ವಮಂಗಳ ಎಂಬ ಹೆಸರು ಬರೆದು ಸ್ಟಾಂಡ್ ರೋಡ್, ಕೋಲ್ಕತ್ತ ಎಂಬ ವಿಳಾಸ ಇತ್ತು. ತಪಾಸಣೆ ವೇಳೆ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಇನ್ನು ಬಾಕ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಅನುಮಾನಾಸ್ಪದವಾಗಿ ಕಾರು ಬಂದಿರುವುದು ಪತ್ತೆಯಾಗಿದೆ. ಕಾರಿನ ನಂಬರ್ ಆಧರಿಸಿ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ತಿಪಟೂರಿನಲ್ಲಿ ವ್ಯಕ್ತಿಯೊಬ್ಬನ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದಲ್ಲಿ ಮತ್ತೊಬ್ಬನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಇಡಿಯ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.