ತಮ್ಮ ಕ್ಷೇತ್ರದ ಗ್ರಾಮಗಳಿಗೆ ಕಾಲುವೆಗಳ ಮೂಲಕ ಕೃಷಿಗೆ ನೀರು ಪೂರೈಕೆ ಮಾಡದಿದ್ದಾರೆ ರಾಜೀನಾಮೆ ನೀಡುವುದಾಗಿ ವಿಜಯಪುರ ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಂಡಿ ತಾಲೂಕಿನ ಕೊನೆಯ ಭಾಗದ ಹಳ್ಳಿಗಳಿಗೆ ಕಾಲುವೆ ನೀರು ಬಂದಿಲ್ಲ. ಈ ಹಳ್ಳಿಗಳಿಗೆ ನೀರು ಹರಿಸುವುದಕ್ಕಾಗಿಯೇ ಗುತ್ತಿ ಬಸವಣ್ಣ ಏತ ನೀರಾವರಿ, ಇಂಡಿ ಶಾಖಾ ಕಾಲುವೆಗಳಿವೆ. ಅವುಗಳ ಮೂಲಕ ನೀರು ಹರಿಸದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
“ಇಂಡಿ ತಾಲೂಕು ಬರಪೀಡಿತವಾಗಿದೆ. ಹೀಗಿದ್ದರೂ, ತಾಲೂಕಿನ ಹಳ್ಳಿಗಳಿಗೆ ನೀರು ಪೂರೈಕೆಯಾಗಿಲ್ಲ. ನೀರು ಬರದೆ ಹೋದರೆ ನಾನು ಯಾರಿಗೂ ‘ಕೇರ್’ ಮಾಡುವುದಿಲ್ಲ. ಜನರಿಗೆ ಅನುಕೂಲ ಆಗದಿದ್ದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಜನರ ಸಮಸ್ಯೆಗೆ ಸ್ಪಂದಿಸಲು ಆಗಿದಿದ್ದ ಮೇಲೆ ಯಾಕಾಗಿ ರಾಜಕೀಐ ಮಾಡಬೇಕು” ಎಂದು ಹೇಳಿದ್ದಾರೆ.