ಹರಿಹರ ನಗರದಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಹಾಕಲು ಎಸ್‌ಜೆವಿಪಿ ಕಾಲೇಜು ಆವರಣವನ್ನು ನಿಗದಿಪಡಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಆಗ್ರಹಿಸಿದೆ.
ನಗರಸಭೆ ಆಯುಕ್ತರಿಗೆ ನ.06ರಂದು ಮನವಿ ಸಲ್ಲಿಸಿ ಮಾತನಾಡಿದ ಡಿಎಸ್‌ಎಸ್ ತಾಲೂಕು ಸಂಚಾಲಕ ಮಂಜಪ್ಪ ಜಿ.ಎಂ, “ಎಸ್‌ಜೆವಿಪಿ ಕಾಲೇಜು ಅವರಣದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪೆಟ್ರೋಲ್ ಬಂಕ್, ವಾಸೋಪಯೋಗಿ ಮನೆಗಳು ಇರುವುದರಿಂದ ಜನದಟ್ಟಣೆ ಹೆಚ್ಚಾಗಿರುತ್ತದೆ, ಇದು ಪಟಾಕಿ ಅಂಗಡಿಗಳಿಗೆ ಹೆಚ್ಚು ಸುರಕ್ಷಿತ ಸ್ಥಳವಲ್ಲ” ಎಂದು ಹೇಳಿದ್ದಾರೆ.
“ಶೈಕ್ಷಣಿಕವಾಗಿ ಬಳಕೆಯಲ್ಲಿದ್ದು ವಾಣಿಜ್ಯ ಉಪಯೋಗಕ್ಕಾಗಿ ಬಳಸಿರುವುದು ಖಂಡನೀಯ. ಪಟಾಕಿ ಅಂಗಡಿಗಳಿಗೆ ಅನುಮತಿ ಇಲ್ಲಿ ನೀಡದೆ, ಊರಿನ ಹೊರ ವಲಯದಲ್ಲಿಡಲು ಅನುಮತಿ ನೀಡಬೇಕು ಹಾಗೂ ಕೆಲ ಪಟಾಕಿ ಅಂಗಡಿಗಳಿಗೆ ಪರವಾನಿಗೆ ಇಲ್ಲದಿರುವುದು ಕಂಡುಬಂದಿರುವುದರಿಂದ ನಗರಸಭೆ ಆಧಿಕಾರಿಗಳು ಮತ್ತು ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಭಾಸ್ಕರ್ ಬಿ.ಎಂ, ವಿಶ್ವನಾಥ್ ಕೆ. ಬೇವಿನಹಳ್ಳಿ, ಕೀರ್ತಿ ಎನ್, ಹರೀಶ್ ರಾಜನಹಳ್ಳಿ, ವಿನಾಯಕ ಹಾಗೂ ಮುಂತಾದವರು ಇದ್ದರು.