ಎದ್ದೇಳು ಕರ್ನಾಟಕ ಮುಖಾಂತರ ನಾವು ‘ಚಾಯ್ ಪೆ ಚರ್ಚೆ, ಮನ್‌ಕಿ ಬಾತ್’ ಯಾಕೆ ಮಾಡಬಾರದು. ನಾವು ಕೂಡಾ ಮಾಡಬಹುದು. ಜಗತ್ತಿನಲ್ಲಿ ಯುದ್ಧ ನಡೆತಿದೆ. ಮಕ್ಕಳ ಮೇಲೆ ಹಿಂಸೆ, ಶಾಲೆಗಳ ಮೇಲೆ ದಾಳಿಗಳು ನಡೆಯುತ್ತಿವೆ. ಇವುಗಳ ವಿರುದ್ಧ ದನಿ ಎತ್ತಬೇಕು. ಸೌಹಾರ್ದತೆ, ಸಾಮರಸ್ಯ ಬೆಳೆಸಬೇಕು ಎಂದು ಫಾದರ್ ತಿಯೋಳಾ ಹೇಳಿದ್ದಾರೆ.
ವಿಜಯಪುರದಲ್ಲಿ ಪ್ರಗತಿಪರ ಸಂಘಟನೆಗಳ ನಡೆಸಿದ ‘ಎದ್ದೇಳು ಭಾರತ’ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು. “ಇತ್ತೀಚಿನ ದಿನಗಳಲ್ಲಿ ಇಸ್ರೇಲ್, ಪ್ಯಾಲೆಸ್ತೀನ್‌ನಲ್ಲಿ ನಡೆಯುತ್ತಿರುವ ಘಟನೆಗಳು ತುಂಬಾ ನೋವು ತರವಂತಹವು. ಇಂತ ಘಟನೆಗಳು ನಡೆಯದ ಹಾಗೆ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು” ಎಂದಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅಕ್ರಮ್ ಮಸಾಳಕರ, “ಕೋಮುವಾದ ಶಕ್ತಿಗಳನ್ನು ಸೋಲಿಸುವುದು ಈ ಘಳಿಗೆಯಲ್ಲಿ ಅವಶ್ಯಕತೆ ಇದೆ. ದ್ವೇಷದಿಂದ ದೇಶವನ್ನು ಉಳಿಸಬೇಕಿದೆ. ನಮಗೆ ಶಾಂತಿ ಬೇಕು. ಈಗಿನ ಸರ್ಕಾರ ಶಾಂತಿಭಂಗ ಮಾಡುತ್ತಿದೆ. ನಮ್ಮ ಸಂಸ್ಕೃತಿ ಉಳಸಬೇಕಿದೆ” ಎಂದು ಹೇಳಿದ್ದಾರೆ.
ಅಬ್ದುಲ್ ಖಧಿರ್ ಮಾತನಾಡಿ, “ಇಸ್ರೇಲ್ ಹೆಸರಿನಲ್ಲಿ ಬಿಜೆಪಿ ಭಾರತದಲ್ಲಿ ರಾಜಕೀಯ ಮಾಡುತ್ತಿದೆ. ಎದ್ದೇಳು ಕರ್ನಾಟಕ ಸಣ್ಣ ಪ್ರಯತ್ನವಾಗಿತ್ತು. ಈಗ ಲೋಕಸಭೆ ಚುನಾವಣೆ ಬರುತ್ತಿದೆ. ಅದಕ್ಕಾಗಿ ನಾವೆಲ್ಲರು ಒಟ್ಟಾಗಿ ಕೆಲಸ ಮಾಡಬೇಕು” ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಡಾ. ರಿಯಾಜ್ ಫಾರೂಕ್, ಎಂಸಿ ಮುಲ್ಲಾ, ಫಯಾಜ್ ಕಲಾದಿಗಿ ಇತರರು ಇದ್ದರು.