ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಗೌರವಾರ್ಥವಾಗಿ ನವೆಂಬರ್ 7ನ್ನು ʼವಿದ್ಯಾರ್ಥಿ ದಿನʼ ಎಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ಒತ್ತಾಯಿಸಿದೆ.
ಸಂಘಟನೆಯ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಅಂಬೇಡ್ಕರ್ ಅವರ ಶಾಲಾ ಪ್ರವೇಶ ದಿನವಾದ ನವೆಂಬರ್ 7ನ್ನು ‘ವಿದ್ಯಾರ್ಥಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರ ಗೌರವಾರ್ಥವಾಗಿ ನವೆಂಬರ್ 07ರಂದು ಮಹಾರಾಷ್ಟ್ರದಾದ್ಯಂತ ವಿದ್ಯಾರ್ಥಿ ದಿನವನ್ನು ಆಚರಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
64 ವಿಷಯಗಳಲ್ಲಿ ಅತ್ಯುನ್ನತ ಮಟ್ಟದ ಜ್ಞಾನವನ್ನು ಹೊಂದಿದ್ದರೂ, ಅಂಬೇಡ್ಕರರು ತನ್ನನ್ನು ತಾನು ಜೀವಮಾನವಿಡೀ ವಿದ್ಯಾರ್ಥಿ ಎಂದು ಪರಿಗಣಿಸಿ, ಆದರ್ಶ ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾರೆ. ಮಹಾರಾಷ್ಟ್ರ ಸರ್ಕಾರದಂತೆ ಕರ್ನಾಟಕ ಸರ್ಕಾರವು ಅವರ ಶಾಲಾ ಪ್ರವೇಶ ದಿನವನ್ನು ವಿದ್ಯಾರ್ಥಿ ದಿನವೆಂದು ಘೋಷಿಸುವ ಮೂಲಕ ಅವರನ್ನು ಗೌರವಿಸಬೇಕು. ಈ ದಿನದಂದು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅಂಬೇಡ್ಕರ್ ಅವರ ಜೀವನಾಧಾರಿತ ವಿವಿಧ ಅಂಶಗಳ ಕುರಿತು ಪ್ರಬಂಧ ಸ್ಪರ್ಧೆ, ಭಾಷಣ, ಕವನ ವಾಚನ ಸ್ಪರ್ಧೆಗಳನ್ನು ಆಯೋಜಿಸಬೇಕು ಎಂದು ಮನವಿ ಪತ್ರದಲ್ಲಿ ಕೇಳಿಕೊಂಡಿವೆ.
ನವೆಂಬರ್ 07, 1900ರಂದು ಅಂಬೇಡ್ಕರ್ ಅವರು ಮಹಾರಾಷ್ಟ್ರದ ಸತಾರಾದಲ್ಲಿನ ರಾಜವಾಡ ಚೌಕ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ (ಈಗ ಪ್ರತಾಪ್ ಸಿಂಗ್ ಹೈಸ್ಕೂಲ್) ಪ್ರವೇಶಿಸಿದರು. ಇಲ್ಲಿ ಅವರು 1904ರವರೆಗೆ, ಅಂದರೆ ನಾಲ್ಕನೇ ತರಗತಿಯವರೆಗೆ ಕಲಿತರು. ಶಾಲೆಯು ಅವರ ಹೆಸರನ್ನು ‘ಭೀವಾ ರಾಮ್‌ಜಿ ಅಂಬೇಡ್ಕರ್’ ಎಂದು ದಾಖಲಿಸುತ್ತದೆ. ಶಾಲೆಯ ರಿಜಿಸ್ಟರ್‌ನಲ್ಲಿ 1914 ಸಂಖ್ಯೆಯ ಮುಂದೆ ಮಕ್ಕಳ ಭೀವಾ (ಭೀಮರಾವ್) ಸಹಿ ಇದೆ. ಈ ಐತಿಹಾಸಿಕ ದಾಖಲೆಯನ್ನು ಶಾಲೆಯು ಸಂರಕ್ಷಿಸಿದೆ.
ಪತ್ರಕರ್ತ ಮತ್ತು ಸತಾರಾ ಪ್ರವರ್ತನ ಸಂಘಟನೆಯ ಅಧ್ಯಕ್ಷ ಅರುಣ್ ಜವಳೆ ಅವರು 2003 ರಿಂದ ಅಂಬೇಡ್ಕರ್ ಅವರ ಶಾಲಾ ಪ್ರವೇಶ ದಿನ ಅಥವಾ ಶಾಲಾ ಪ್ರವೇಶ ದಿನವನ್ನು ಆಯೋಜಿಸುತ್ತಿದ್ದಾರೆ. ಅವರು ಈ ದಿನವನ್ನು ವಿದ್ಯಾರ್ಥಿ ದಿನವನ್ನಾಗಿ ಘೋಷಿಸಲು ಮಹಾರಾಷ್ಟ್ರ ಸರ್ಕಾರವನ್ನು ಪದೇ ಪದೇ ಒತ್ತಾಯಿಸಿದರು. ನಂತರ, 27 ಅಕ್ಟೋಬರ್ 2017 ರಂದು, ಮಹಾರಾಷ್ಟ್ರ ಸರ್ಕಾರವು ಈ ದಿನವನ್ನು ವಿದ್ಯಾರ್ಥಿ ದಿನ ಎಂದು ಘೋಷಿಸಿತು. ಈ ಕಾರಣವಾಗಿ ಕರ್ನಾಟಕ ಸರ್ಕಾರವೂ ಕೂಡ ಪ್ರತೀ ವರ್ಷ ನವೆಂಬರ್ 7 ಅನ್ನು “ವಿಧ್ಯಾರ್ಥಿ ದಿನ” ವನ್ನಾಗಿ ಆಚರಣೆ ಮಾಡಲು ಘೋಷಣೆ ಹೊರಡಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಡಿವಿಪಿ ಧಾರವಾಡ ಜಿಲ್ಲಾ ಘಟಕವು ಮನವಿ ಮಾಡಿಕೊಳ್ಳಲಾಯಿತು.
ಈ ವೇಳೆ ಪರಿಷತ್ ನ ವಿಭಾಗೀಯ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಸಹ ಸಂಚಾಲಕರು ಹಾಗೂ ವಿವಿಧ ಜಿಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು.