ಭಾರತದಿಂದ ಕಾಂಬೋಡಿಯಾ: ಮಾನವ ಕಳ್ಳ ಸಾಗಾಣಿಕೆ ಜಾಲದಿಂದ ಬದುಕಿಬಂದ ಕಾಫಿನಾಡಿನ ಯುವಕನ ಕಥೆ

Date:

Advertisements

ಉತ್ತಮ ಜೀವನ ಸಾಗಿಸಬೇಕು. ತನ್ನ ತಂದೆ-ತಾಯಿ ಹಾಗೂ ಪ್ರೀತಿ ಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸ್ವಾಭಿಮಾನ-ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ಕನಸು ಹೊತ್ತು ಹಲವರು ಪಟ್ಟಣ, ನಗರ, ದೇಶ, ವಿದೇಶಗಳತ್ತ ನಡೆಯುತ್ತಾರೆ. ಅಂತಹದೊಂದು ಕನಸು ಹೊತ್ತು ಹೊರಟ ಚಿಕ್ಕಮಗಳೂರು ಜಿಲ್ಲೆಯ ಅಶೋಕ್ ಎಂಬ ಯುವಕ ಸಿಲುಕಿಕೊಂಡಿದ್ದು ಮಾನವ ಕಳ್ಳ ಸಾಗಾಣಿಕೆಯ ಜಾಲಕ್ಕೆ. ಅಂತಹದೊಂದು ಜಾಲದಿಂದ ಅವರು ಪಾರಾಗಿ ಸದ್ಯ ತನ್ನೋರಿಗೆ ಮರಳಿದ್ದಾರೆ. ಬನ್ನಿ, ಅವರು ಸಿಕ್ಕಿಹಾಕಿಕೊಂಡಿದ್ದ ವಿಷವರ್ತುಲ, ಮತ್ತದರ ಕಾರ್ಯಾಚರಣೆ, ಬಚಾವಾಗಿ ಬಂದ ಕತೆ ಕೇಳೋಣ…

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಮಹಲ್ಗೋಡ್‌ ಗ್ರಾಮದ ದಲಿತ ಸಮುದಾಯದ ಸುರೇಶ್ ಮತ್ತು ಪ್ರೇಮ ಅವರ ಹಿರಿಯ ಮಗ ಅಶೋಕ್‌. ಬಿಕಾಮ್ ಓದಿರುವ ಅವರು ನಿರುದ್ಯೋಗದ ಸಮಸ್ಯೆಯಿಂದಾಗಿ ತಮ್ಮೂರಿನಲ್ಲೇ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಒಂದಷ್ಟು ಆರ್ಥಿಕ ನೆರವು ನೀಡುತ್ತಿದ್ದರು.

ಇಪ್ಪತ್ತೇಳು ವರ್ಷದ ಅಶೋಕ್‌ ಅವರು ಒಂದೊಳ್ಳೆ ಉದ್ಯೋಗ ಹುಡುಕಿಕೊಂಡು, ಉತ್ತಮ ಜೀವನ ಕಟ್ಟಿಕೊಳ್ಳಲು ಉದ್ಯೋಗದ ಹುಡುಕಾಟದಲ್ಲಿದ್ದರು. ಇಂತಹ ಸಂದರ್ಭದಲ್ಲಿ ಅವರಿಗೆ ಪರಿಚಯವಾಗಿದ್ದು ನಿಕ್ಷೇಪ್ ಮತ್ತು ಭರತ್ ಎಂಬ ಮಧ್ಯವರ್ತಿಗಳು. ಅವರಿಬ್ಬರೂ ‘ತಾವೊಂದು ಏಜೆನ್ಸಿ ನಡೆಸುತ್ತಿದ್ದೇವೆ. ಅದರ ಶಾಖೆಗಳನ್ನು ನರಸಿಂಹರಾಜಪುರ ಮತ್ತು ಮಣಿಪಾಲ್ ತಾಲೂಕಿನಲ್ಲಿ ತೆರೆಯಲಿದ್ದೇವೆ. ಹೊರದೇಶದಲ್ಲಿ ಉದ್ಯೋಗ ಕೊಡಿಸುತ್ತೇವೆ. ಒಳ್ಳೆಯ ಸಂಬಳವೂ ದೊರೆಯುತ್ತದೆ. ಅದಕ್ಕಾಗಿ, ಮೊದಲಿಗೆ 1,60,000 ರೂ. ಹಣ ಕಟ್ಟಬೇಕು’ ಎಂದು ಅಶೋಕ್ ಅವರನ್ನು ಪುಸಲಾಯಿಸಿದ್ದರು.

Advertisements

ನಿರುದ್ಯೋಗದಿಂದ ಬಳಲಿದ್ದ ಅಶೋಕ್, ಹಣ ಕಟ್ಟಿಯಾದರೂ ಉದ್ಯೋಗ ಪಡೆದುಕೊಳ್ಳಬೇಕೆಂದು ಕೂಡಿಟ್ಟಿದ್ದ ಹಣ ಮತ್ತು ಪಾಸ್‌ಪೋರ್ಟ್‌ ಮಾಡಿಸಿ ಈ ಮಧ್ಯವರ್ತಿಗಳ ಕೈಗಿತ್ತಿದ್ದರು. ಅವರನ್ನು ಕಾಂಬೋಡಿಯಾಗೆ ಕಳಿಸುವುದಾಗಿ ಅವರಿಬ್ಬರೂ ಹೇಳಿದ್ದಾರೆ. ಆದರೆ, ಅಶೋಕ್‌ ಕಾಂಬೋಡಿಯಾಗೆ ಹೋಗಲು ಒಪ್ಪಿಲ್ಲ. ಆದರೂ, ಸದ್ಯಕ್ಕೆ ಕಾಂಬೋಡಿಯಾದಲ್ಲಿರಿ, ಆನಂತರ ದೆಹಲಿ ಅಥವಾ ಹೈದರಾಬಾದ್‌ಗೆ ಪೋಸ್ಟಿಂಗ್ ಮಾಡಿಸಿಕೊಡುತ್ತೇವೆಂದು ನಂಬಿಸಿ, ಬಲವಂತವಾಗಿ ಕಾಂಬೋಡಿಯಾಗೆ ಕರೆದೊಯ್ದಿದ್ದಾರೆ. ಅಲ್ಲಿ, ಕ್ರೌನ್ ಕಂಪನಿಯಲ್ಲಿ ಡೇಟಾ ಎಂಟ್ರಿ ಕೆಲಸವೆಂದು ಸುಳ್ಳು ಆಶ್ವಾಸನೆ ಕೊಟ್ಟು, ಅವರನ್ನು ಲಕ್ಷಾಂತರ ರೂಪಾಯಿಗಳಿಗೆ ಚೀನಾ ದೇಶದ ಸ್ಕ್ಯಾಮ್, ಹ್ಯಾಕ್ ಮಾಡುವ ಕೆಲಸಕ್ಕೆ ಅವರನ್ನು ಮಾರಾಟ ಮಾಡಿದ್ದಾರೆ. ಹೀಗೆ ತಾವು ಯಾಮಾರಿ ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ಸಿಲುಕಿಕೊಂಡ ಕತೆಯನ್ನು ಸ್ವತಃ ಅಶೋಕ್ ಅವರೇ ಈದಿನ.ಕಾಮ್‌ಗೆ ವಿವರಿಸಿದ್ದಾರೆ.

ಅಶೋಕ್‌ ಅವರನ್ನು ಮಾರಾಟ ಮಾಡುವ ಮುನ್ನವೇ ಅವರಿಂದ ಆ ಇಬ್ಬರೂ ಬ್ರೋಕರ್‌ಗಳು ಅಶೋಕ್‌ ಅವರಿಂದ 2 ಲಕ್ಷ ರೂ. ಹಣ ಕಸಿದುಕೊಂಡಿದ್ದರು. ಅಲ್ಲದೆ, ಆ ಜಾಲಕ್ಕೆ ಸಿಲುಕಿಕೊಂಡ ನಂತರ, ಅಲ್ಲಿಂದ ಹೊರಬರಲು ಕೇಳಿಕೊಂಡಾಗ ಇನ್ನೂ ಒಂದೂವರೆ ಲಕ್ಷ ರೂ. ಹಣ ಕೊಡಬೇಕೆಂದು ಪೀಡಿಸಿದ್ದರು. ತಮ್ಮ ಬಳಿ ಹಣವಿಲ್ಲವೆಂದು ಹೇಳಿದಾಗ, ಇಲ್ಲೇ ಕೆಲಸ ಮಾಡು, ಸಂಬಳ ಬಂದ ಮೇಲೆ ಕೊಡು ಎಂದಿದ್ದರು. ನಾನು ಎಲ್ಲಿದ್ದೀನಿ, ಎನು ಕೆಲಸ ಮಾಡುತ್ತಿದ್ದೀನಿ ಎಂಬುದೇ ಅರಿವಿರಲಿಲ್ಲ. ಬೆಳಗ್ಗೆ 11 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೆ ಕೆಲಸ ಮಾಡಬೇಕಿತ್ತು. ಊಟಕ್ಕೆಂದು ಅರ್ಧ ಗಂಟೆ ಸಮಯ ಕೊಡುತ್ತಿದ್ದರು. ಫೋನ್‌ ಬಳಸುವಂತಿರಲಿಲ್ಲ. ಫೋಟೋ-ವಿಡಿಯೋ ತೆಗೆದುಕೊಳ್ಳುವಂತಿರಲಿಲ್ಲ. ಸಂಪೂರ್ಣ ಲಾಕ್‌ ಮಾಡಲಾಗಿತ್ತು ಎಂದು ಅಶೋಕ್ ತಿಳಿಸಿದ್ದಾರೆ.

ತಂದೆ-ತಾಯಿಯೊಂದಿಗೆ ಮಾತನಾಡುತ್ತೇವೆಂದರೂ ಅವಕಾಶ ಕೊಡುತ್ತಿರಲಿಲ್ಲ. ಆದರೆ, ಕೆಲವು ದಿನಗಳ ನಂತರ, ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಬಹುದು ಎಂಬ ಅನುಮಾನದಿಂದ ಕೆಲವು ಜನರೊಂದಿಗೆ ನನ್ನನ್ನು ರಾತ್ರಿಯ ಸಮಯದಲ್ಲಿ ಗೊತ್ತಿಲ್ಲದ ಮತ್ತೊಂದು ಜಾಗಕ್ಕೆ ಕರೆದೊಯ್ದರು. ಅಲ್ಲಿ ನನ್ನ ಪರಿಸ್ಥಿತಿ ಭಯಾನಕವಾಗಿತ್ತು ಎಂದು ಅವರು ಹೇಳಿದ್ದಾರೆ.

ಈ ನಡುವೆ, ಆ ಇಬ್ಬರು ಬ್ರೋಕರ್‌ಗಳು ಮತ್ತೆ ಹಣ ಕೇಳಿದರು. ನಾನು ಇಲ್ಲವೆಂದಾಗ, ನನಗೆ ಮೊಬೈಲ್‌ ಕೊಟ್ಟು ನಿನ್ನ ತಂದೆ-ತಾಯಿಗೆ ಫೋನ್‌ ಮಾಡಿ ಹಣ ಕಳಿಸಲು ಹೇಳು ಎಂದು ಧಮ್ಕಿ ಹಾಕಿದ್ದರು. ಆಗ, ನನ್ನ ಸ್ನೇಹಿತರಿಗೆ ಫೋನ್‌ ಮಾಡಿ ತಾನು ಮಾನವ ಕಳ್ಳ ಸಾಗಾಣಿಕೆ ಜಾಲದಲ್ಲಿ ಸಿಲುಕಿರುವುದಾಗಿ ವಿವರಿಸಿದೆ. ಬಳಿಕ, ಚಿಕ್ಕಮಗಳೂರಿನ ಪೊಲೀಸರಿಗೂ ಮಾಹಿತಿ ನೀಡಿದೆ. ಅದು ಗೊತ್ತಾಗಿ, ನನ್ನ ಮೇಲೆ ಹಲ್ಲೆ ಮಾಡಿ, 7 ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ್ದರು. ಅಲ್ಲದೆ, ಕಾಂಬೋಡಿಯಾದಿಂದ ನನ್ನನ್ನು ನಮ್ಮೂರಿಗೆ ಕಳಿಸಬೇಕೆಂದರೆ 13 ಲಕ್ಷ ರೂ. ಕೊಡಬೇಕು. ಇಲ್ಲದಿದ್ದರೆ ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರು ಎಂದು ಅಶೋಕ್‌ ತಾವು ಅನುಭವಿಸಿದ ಯಾತನೆಯನ್ನು ಬಿಡಿಸಿಟ್ಟಿದ್ದಾರೆ.

ಅಶೋಕ್‌ ಅವರ ಪೋಷಕರು ಚಿಕ್ಕಮಗಳೂರಿನ ಅಧಿಕಾರಿಗಳು, ಶಾಸಕರು, ಸಂಸದರು, ಸಚಿವರನ್ನು ಭೇಟಿ ಮಾಡಿ ತಮ್ಮ ಮಗನನ್ನು ರಕ್ಷಿಸುವಂತೆ ಮನವಿ ಮಾಡಿದ್ದರು. ಮಾನವ ಕಳ್ಳಸಾಗಾಣಿಕೆಯ ಜಾಲ ನಡೆಸುತ್ತಿದ್ದ ನಿಕ್ಷೇಪ್‌ ಮತ್ತು ಭರತ್‌ನನ್ನು ಬಂಧಿಸಬೇಕು, ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ಅಧಿಕಾರಿಗಳು ಕಾಂಬೋಡಿಯಾ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ, ಭಾನುವಾರ ರಾತ್ರಿ ಅಶೋಕ್ ಅವರನ್ನು ಅವರ ಮಾಗುಂಡಿ ಗ್ರಾಮಕ್ಕೆ ಕರೆತಂದಿದ್ದಾರೆ. ಐದು ತಿಂಗಳ ಕಾಲ ಚಿತ್ರಹಿಂಸೆ ಅನುಭವಿಸಿದ ಅಶೋಕ್ ಮತ್ತೆ ಮನೆ ಸೇರಿದ್ದಾರೆ.

ಯುವಜನರು ವಿದೇಶಿ ಉದ್ಯೋಗದ ಆಸೆಗೆ ಯಾರನ್ನೋ ನಂಬಿ ಮೋಸ ಹೋಗಬಾರದು. ತನ್ನಂತೆ ಮಾನವ ಕಳ್ಳ ಸಾಗಾಣಿಕೆ ಜಾಲಕ್ಕೆ ಸಿಲುಕಿಕೊಂಡು ಜೀವನ ಕಳೆದುಕೊಳ್ಳಬಾರದು. ಇಂತಹ ಸಂದರ್ಭದಲ್ಲಿ ಯೋಚಿಸಿ, ಎಚ್ಚರಿಕೆಯಿಂದ ಮುನ್ನಡೆಯಬೇಕು ಎಂದು ಅಶೋಕ್ ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಗಿರಿಜಾ ಎಸ್‌ ಜಿ
ಗಿರಿಜಾ ಎಸ್‌ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X