ಜಿಲ್ಲೆಯಲ್ಲಿ ಕಬ್ಬು ಬೆಳೆದ ಪ್ರದೇಶಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಲು ಹಾಗೂ ಕಬ್ಬಿನ ಇಳುವರಿಯ ಕುರಿತು ವಾಸ್ತವತೆಯ ಪರಿಶೀಲನೆ ನಡೆಸಲು ತಂಡವನ್ನು ರಚಿಸಲಾಗಿದ್ದು ತಂಡದವರು ನಿಗದಿತ ಸಮಯದಲ್ಲಿಯೇ ಕಬ್ಬು ಬೆಳೆದ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಬ್ಬಿನ ಇಳುವರಿ ಪರಿಶೀಲನೆ ಕಾಲಕ್ಕೆ ಸಕ್ಕರೆ ಕಾರ್ಖಾನೆಯವರು ಹಾಜರಿರುವುದು ಕಡ್ಡಾಯವಾಗಿದೆ. ಕಬ್ಬು ಕಟಾವು ಪ್ರಕ್ರಿಯೆಯನ್ನು ಜೇಷ್ಠತಾ ಆಧಾರದ ಮೇಲೆ ಜರುಗುವ ಕುರಿತು ಕ್ರಮ ಕೈಗೊಳ್ಳುವುದು. ಈ ಕುರಿತು ಸಕ್ಕರೆ ಕಾರ್ಖಾನೆಯವರು ಜೇಷ್ಠತಾ ಪಟ್ಟಿಯನ್ನು ತಂಡದ ಮುಖ್ಯಸ್ಥರಿಗೆ ಜೇಷ್ಠತಾ ಪಟ್ಟಿ ಸಲ್ಲಿಸಬೇಕು.
ಕಬ್ಬಿನ ಕಟಾವು ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಗ್ಯಾಂಗ್ ಮನ್‍ಗಳಿಂದ, ಕೂಲಿಕಾರರಿಂದ, ಸಾಗಾಣಿಕೆದಾರರಿಂದ ಯಾವುದೇ ತೊಂದರೆಗಳಾಗದಂತೆ ಅಗತ್ಯ ಸೂಚನೆ ನೀಡಬೇಕು. ಕಬ್ಬು ಬೆಳೆಗೆ ಗೊಣ್ಣೆ ರೋಗದ ಭೇತಿ ಇರುವುದರಿಂದ ತಜ್ಞರೊಂದಿಗೆ ಸಮಾಲೋಚಿಸಿ ಅಗತ್ಯ ವೈಜ್ಞಾನಿಕ ಸಲಹೆಗಳನ್ನು ನೀಡಬೇಕು. ಕಬ್ಬು ಬೆಳೆಯ ಕಟಾವು ಪ್ರಕ್ರಿಯೆ ಪ್ರಾರಂಭದಿಂದ ಮುಗಿಯುವವರೆಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.
ಕಬ್ಬು ಕಟಾವು ಪ್ರಕ್ರಿಯೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣದ ಅಮಿಷವೊಡ್ಡಿ ಜೇಷ್ಠತಾ ಪ್ರಕ್ರಿಯೆಯನ್ನು ಬದಲಿಸುವ ಸಂಭವನೀಯತೆಯನ್ನು ತಡೆಗಟ್ಟಬೇಕು ಹಾಗೂ ಕಟಾವು ಸಮಯದಲ್ಲಿ ರೈತರೊಂದಿಗೆ ಹಾಗೂ ಗ್ಯಾಂಗ್‍ಮನ್‍ಗಳೊಂದಿಗೆ ಮಾತನಾಡಿ ಮಾಡಿಕೊಂಡು ರೈತರಿಗೆ ಉಂಟಾಗಬಹುದಾದ ತೊಂದರೆಗಳನ್ನು ಹಾಗೂ ನಷ್ಟವನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದರು.
ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಗಂಗಪ್ಪ ಅವರು ಮಾತನಾಡಿ ಪ್ರಸಕ್ತ ಸಾಲಿನ ಸಕ್ಕರೆ ಹಂಗಾಮಿಗೆ ಕೇಂದ್ರ ಸರ್ಕಾರದಿಂದ ನ್ಯಾಯಯುತ ಮತ್ತು ಲಾಭದಾಯಕ ( ಎಫ್.ಆರ್.ಪಿ) ದರವನ್ನು ನಿಗದಿಪಡಿಸಿದ್ದು, ಕಬ್ಬು ಅರಿಯುವ ಮುನ್ನ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಹಾಗೂ ಎಫ್.ಆರ್.ಪಿ ದರ ಹೆಚ್ಚಿಸುವ ಹಾಗೂ ಇತರೆ ವಿಷಯಗಳ ಕುರಿತು ಸಕ್ಕರೆ ಕಾರ್ಖಾನೆಯ ಮಂಡಳಿಯವರ ಹಾಗೂ ಕಬ್ಬು ಬೆಳೆಗಾರರ ಸಭೆಯನ್ನು ಜರುಗಿಸಲಾಗಿದೆ ಎಂದರು.
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಶೀಲಿಸಲು ಹಾಗೂ ವಾಸ್ತವತೆ ಅರಿಯಲು ಆಹಾರ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ, ಸಕ್ಕರೆ ಕಾರ್ಖಾನೆಯ ಅಧಿಕಾರಿಗಳನ್ನೊಳಗೊಂಡಂತೆ 4 ತಂಡಗಳನ್ನು ರಚಿಸಲಾಗಿದೆ. ಉಪವಿಭಾಗಾದಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು, ಮುಂಡರಗಿ ತಹಶೀಲ್ದಾರರು ಒಂದೊಂದು ತಂಡಗಳಿಗೆ ಮುಖ್ಯಸ್ಥರುಗಳಾಗಿರುತ್ತಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ , ಆಹಾರ ಮತ್ತು ನಾಘರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಗಂಗಪ್ಪ , ಎ.ಪಿ.ಎಂ.ಸಿ.ಯ ಸಹಾಯಕ ನಿರ್ದೇಶಕ ಎಂ.ಆರ್. ನದಾಫ್, ವಿಜಯನಗರ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.