ವಿಶೇಷ ವರ್ಗಗಳೆಂದು ಗುರುತಿಸಿರುವ 14 ವರ್ಗಗಳ ವಸತಿ ಮತ್ತು ನಿವೇಶನ ಹಂಚಿಕೆಗಾಗಿ ಅನೇಕ ಹಂತದ ಹೋರಾಟಗಳು ನಡೆದಿದ್ದರೂ ಜಿಲ್ಲಾಡಳಿತ ನಿರ್ಲಕ್ಷಿಸುತ್ತಾ ಬಂದಿದೆ. ವಾರದೊಳಗೆ ಹಂಚಿಕೆಗೆ ಮುಂದಾಗದಿದ್ದಲ್ಲಿ ಫಲಾನುಭವಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಲಾಗುವುದು ಎಂದು ಡಿಎಸ್‌ಎಸ್ ಸಂಚಾಲಕ ನರಸಿಂಹಲು ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “2004-05ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ದೇವದಾಸಿಯರು ಸೇರಿದಂತೆ 14 ವರ್ಗಗಳನ್ನು ವಿಶೇಷ ವರ್ಗವೆಂದು ಪರಿಗಣಿಸಿ ವಸತಿ, ನಿವೇಶನ ಹಂಚಿಕೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. 2009 ರಿಂದ ಅನೇಕ ಹಂತದ ಹೋರಾಟಗಳು ನಡೆಯುತ್ತಾ ಬಂದಿವೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ವಸತಿ ಹಂಚಿಕೆ ಮಾಡುವ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಇಂದಿಗೂ ಸಾಧ್ಯವಾಗಿಲ್ಲ” ಎಂದು ಆರೋಪಿಸಿದರು.
ತಲೆಗೊಂದು ಸೂರು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ವಿಶೇಷ ವರ್ಗದ ಜನರು ಪರಿತಪಿಸುತ್ತಿದ್ದಾರೆ. ಮನವಿ ಸ್ವೀಕರಿಸಿದಾಗಲೆಲ್ಲ ಒಂದು ವಾರದಲ್ಲಿ ಕ್ರಮ ವಹಿಸುವದಾಗಿ ಭರವಸೆ ನೀಡಿದ್ದಾರೆಯೇ ಹೊರತು, ಜಾರಿಗೊಳಿಸುತ್ತಿಲ್ಲ. ಜನತಾ ದರ್ಶನದಲ್ಲಿಯೂ ಮನವಿ ಸಲ್ಲಿಸಲಾಗಿತ್ತು. ಅಂದು ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಆದರೆ ಇಂದಿಗೂ ಹಂಚಿಕೆ ಮಾಡುವ ಯಾವ ಪ್ರಕ್ರಿಯೆಗಳೂ ಪ್ರಾರಂಭವಾಗಿಲ್ಲ” ಎಂದರು.
“ನಗರದ ಸರ್ವೆ 570 ಮತ್ತು 572ರಲ್ಲಿ 972 ಮಂದಿಗೆ ನಿವೇಶನ ಹಂಚಿಕೆಗೆ ಜಾಗ ಗುರುತಿಸಲಾಗಿದೆ. ಆದರೆ ಹಂಚಿಕೆ ಮಾತ್ರ ಆಗಿಲ್ಲ. ವಾರದೊಳಗೆ ಕ್ರಮಕ್ಕೆ ಮುಂದಾಗದೇ ಇದ್ದರೆ ಹೋರಾಟ ಮಾಡುವುದು ಅನಿರ್ವಾಯ” ಎಂದರು.
ದಲಿತ ಸಮರ ಸೇನೆಯ ಜಿಲ್ಲಾಧ್ಯಕ್ಷ ಅನಿಲ್ ನೀಲಕಂಠ ಮಾತನಾಡಿ, “ವಿಶೇಷ ವರ್ಗದ ಜನರಿಗೆ ನಿವೇಶನ, ವಸತಿ ನೀಡಲು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ದೇವದಾಸಿ ಮಹಿಳೆಯರಿಗೆ ಪಿಂಚಣಿ ಸಹಿತ ಮಂಜೂರು ಮಾಡಿಲ್ಲ. ಅವರ ಮಕ್ಕಳಿಗೆ ಶೈಕ್ಷಣಿಕ ಸಾಲ ಯೋಜನೆಯಡಿ 5 ಜನರಿಗೆ ಮಾತ್ರ ನೀಡಿದ್ದಾರೆ. ಇನ್ನುಳಿದ ಜನರಿಗೆ ಯೋಜನೆಯಿಂದ ವಂಚಿಸಲಾಗಿದೆ. ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿಗಳನ್ನು ಕೇಳಿದರೆ ಉಡಾಫೆಯಾಗಿ ಮಹಿಳೆಯರಿಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಇವರ ವಿರುದ್ದ ಸದರ ಬಜಾರ ಠಾಣೆಗೆ ದೂರು ನೀಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಕಬ್ಬು ಇಳುವರಿ ವಾಸ್ತವ ಪರಿಶೀಲನೆಗೆ ತಂಡ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್
“ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಗಸ್ಟ್ 1ರಂದು ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ವಾರದೊಳಗೆ ಕ್ರಮವಾಗದೇ ಇದ್ದರೆ ಹೋರಾಟ ನಡೆಸಲಾಗುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ರಂಗಮ್ಮ, ನಫೀಜಾ, ಶಾಯನಾ ಬೇಗಂ, ರೇಣಮ್ಮ, ಗಂಗಮ್ಮ ಸೇರಿದಂತೆ ಇತರರು ಇದ್ದರು.
ವರದಿ: ಹಫೀಜುಲ್ಲ