ನಿವೇಶನ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಯಚೂರಿನ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ.
ನಿವೇಶನಕ್ಕಾಗಿ ನೂರಾರು ಮಹಿಳೆಯರು, ಬಡಕೂಲಿ ಕಾರ್ಮಿಕರು, ಅಲೆಮಾರಿಗಳು ಹತ್ತು ದಿನಗಳ ಹೋರಾಟ ನಡೆಸಿದ್ದರು. ಆದರೆ, ಜಿಲ್ಲಾಧಿಕಾರಿಗಳಿಂದ ಬಡ ನಿವೇಶನ ರಹಿತರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಸಂಘಟನೆ ಆರೋಪಿಸಿದೆ.
ಕೂಡಲೆ ಜಿಲ್ಲಾಧಿಕಾರಿಗಳು ನಿವೇಶನಕ್ಕಾಗಿ ಮಂಜೂರಾಗಿರುವ ಸರ್ವೇ 30. 581, 929/2. 726/727 BeF ನಂಬರಿಗೆ ಜಮೀನಿಗೆ ಚೆಕ್ಬಂಧಿ ಸಿದ್ಧ ಪಡಿಸಬೇಕು. ನಿವಾಸ ಹಕ್ಕು ಪಡೆದವರಿಗೆ ವಾರದೊಳಗೆ ನಿವೇಶನ ಹಂಚಿಕೆ ಮಾಡಬೇಕು. ನಗರಸಭೆಯಿಂದ ಹಕ್ಕು ಪತ್ರ ನೋಂದಣಿ ಸೇರಿದಂತೆ ಖಾತೆಗಾಗಿ ಫಾರ್ಮ್-3 ವಿತರಿಸಬೇಕು. ಕೊಳಗೇರಿ ಅಭಿವೃದ್ಧಿ ಮಂಡಳಿ ಪಿಎಂಎವೈ ಯೋಜನೆಯಡಿ ಮಂಜೂರಾದ ಮನೆಗಳನ್ನು ಶೀಘ್ರ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು.
ಒಂದು ವಾರದೊಳಗೆ ನಗರದ ಅಘೋಷಿತ ಸ್ಲಂಗಳನ್ನು ಸ್ಲಂ ಎಂದು 3ಪಿ ಅಡಿಯಲ್ಲಿ ಘೋಷಣೆ ಮಾಡಬೇಕು. ಸೌಲಭ್ಯ ವಂಚಿತರಾಗಿರುವ ಎಂಎಂ ಕಾಲೋನಿ, ಕುಲಸುಂಭಿ ಕಾಲೋನಿ, ಆಶ್ರಯ ಕಾಲೋನಿಗಳಿಗೆ ಸೂಕ್ತ ಸೌಲಭ್ಯ ಒದಗಿಸಬೇಕು. ಹಕ್ಕುಪತ್ರ ವಿತರಿಸಬೇಕು. ಸರ್ಕಾರಿ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ವಿತರಿಸಬೇಕು. ಈ ಸೌಲಭ್ಯಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸ್ಲಂ ನಿವಾಸಿಗಳ ಸಮಿತಿ ಅಧ್ಯಕ್ಷ ಜನಾರ್ಧನ ಹಳ್ಳಿ ಬೆಂಚಿ, ಮಹೇಶ್, ಬಸವರಾಜು ಹೊಸೂರು, ನೂರ್ಜಾನ್, ವೆಂಕಟೇಶ್ ಭಂಡಾರಿ, ನಾಗರಾಜ್, ರಾಜಶೇಖರ್, ಮಾಧವ ರೆಡ್ಡಿ.ಜಿ, ರಾಜು, ಸಿ.ಆರ್. ಜಂಭಣ್ಣ, ಹುಲಿಗೇಮ್ಮ ಇತರರು ಇದ್ದರು.