ಕಳೆದ ಹಲವು ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಜತೆಗೆ ತಂಪು ವಾತಾವರಣವಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನ.9 ಮತ್ತು 10 ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
“ನ.9ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಧಾರವಾಡ, ಮಂಡ್ಯ, ಬಳ್ಳಾರಿ, ರಾಯಚೂರು, ಕಲಬುರಗಿ, ವಿಜಯಪುರ, ದಾವಣಗೆರೆ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಉಳಿದಂತೆ ಹಲವು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ” ಎಂದು ಹೇಳಿದೆ.
“ರಾಜ್ಯದಲ್ಲಿ ನ.10 ರಂದು ಮಳೆಯ ಪ್ರಮಾಣ ಕಡಿಮೆಯಾಗಲಿದೆ. ತುಮಕೂರು, ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು, ಮಂಡ್ಯ, ಧಾರವಾಡ ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ” ಇದೆ ಎಂದು ಹೇಳಿದೆ.
ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲೂ ಈಗಾಗಲೇ ಭಾರೀ ಮಳೆಯಾಗುತ್ತಿದೆ. ಈ ಭಾಗಗಳಲ್ಲಿ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ದೀಪಾವಳಿ ಹಬ್ಬ | ಬೆಂಗಳೂರು – ಭಗತ್ ಕಿ ಕೋಠಿ ನಡುವೆ ವಿಶೇಷ ರೈಲುಗಳ ಸಂಚಾರ
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಹವಾಮಾನ ಇಲಾಖೆ ತಜ್ಞ ಪ್ರಸಾದ್, “ನ.8 ರಂದು ಕರಾವಳಿ, ದಕ್ಷಿಣ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಈ ಹಿನ್ನೆಲೆ, ಇಂದು ಚಳಿಯ ವಾತಾವರಣ ಇದೆ. ಮಳೆಯ ಪ್ರಮಾಣ ಹೆಚ್ಚಾದ ಕಾರಣ ವಾಡಿಕೆಗಿಂತ ಗರಿಷ್ಠ ಉಷ್ಣಾಂಶ ಕಡಿಮೆಯಿದೆ. ಆದ್ದರಿಂದ ಚಳಿಯ ವಾತಾವರಣ ಇದೆ. ನ.9 ರಂದು ರಾಜ್ಯದ ಕೆಲವೆಡೆ ಮಳೆಯ ಪ್ರಮಾಣ ಹೆಚ್ಚಾಗಿದೆ. ನ.10 ರಂದು ಮಳೆಯ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ನ.11 ರಿಂದ ಮಳೆ ಇರುವುದಿಲ್ಲ” ಎಂದು ಹೇಳಿದರು.
“ಇಡೀ ರಾಜ್ಯದಲ್ಲಿ ಕರಾವಳಿ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ನ.12ರಿಂದ ಎರಡು ಮೂರು ದಿನ ಒಣಹವೆ ಇರುತ್ತದೆ. ಆ ಬಳಿಕ ರಾಜ್ಯದ ಒಂದೆರಡು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್‌ಗೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನವೆಂಬರ್ ವಾಡಿಕೆ ಮಳೆ 64 ಮಿ.ಮೀ ಇದೆ. ನ.1 ರಿಂದ ನ.8ವರೆಗೂ 107 ಮಿ.ಮೀ ಮಳೆಯಾಗಿದೆ. ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಮಳೆ ಕೊರತೆ ಎದುರಾಗಿತ್ತು. ಇದೀಗ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ” ಎಂದರು.