ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಐಎಂಎ ಬಹುಕೋಟಿ ಹಗರಣ ಪ್ರಕರಣದಲ್ಲಿ ಹಣ ಕಳೆದುಕೊಂಡಿದ್ದ ಸಂತ್ರಸ್ತ ಗ್ರಾಹಕರಿಗೆ ಅಂತೂ ಹಣ ಕೈಸೇರಿದೆ. ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅಲಿಖಾನ್ ಒಡೆತನದ ಆಸ್ತಿಗಳನ್ನು 2023ರ ಫೆಬ್ರವರಿಯಲ್ಲಿ ‘ಕಾಂಪಿಟೆಂಟ್ ಅಥಾರಿಟಿ’ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಅದರಿಂದ ಬಂದ ಹಣವನ್ನು ಸಂತ್ರಸ್ತ ಗ್ರಾಹಕರ ಖಾತೆಗೆ ಹಂತ-ಹಂತವಾಗಿ ಜಮೆ ಮಾಡುತ್ತಿದೆ.
ಮನ್ಸೂರ್ ಅಲಿಖಾನ್ ಒಡೆತನದ ಐಎಂಎ ಜುವೆಲ್ಲರಿಯಲ್ಲಿದ್ದ ವಜ್ರ, ಚಿನ್ನ, ಬೆಳ್ಳಿಯನ್ನು ಜಪ್ತಿ ಮಾಡಿದ್ದ ಸರ್ಕಾರವು ಕಾಂಪಿಟೆಂಟ್ ಅಥಾರಿಟಿ ಮೂಲಕ ಇ-ಹರಾಜು ಮಾಡಿತ್ತು. ಅದರಿಂದ ಬಂದ ಒಟ್ಟು 68 ಕೋಟಿ ರೂ. ಹಣವನ್ನು ಸಂತ್ರಸ್ತ ಗ್ರಾಹಕರಿಗೆ ಹಂಚಿಕೆ ಮಾಡುತ್ತಿದೆ.
ಮರಳಿ ಹಣ ಪಡೆದ ಸಂತ್ರಸ್ತ ಗ್ರಾಹಕರ ಮೊಗದಲ್ಲಿ ಸಂತೋಷ ಕಾಣಿಸುತ್ತಿದೆ. “ನಮ್ಮ ಹಣವನ್ನು ಮರಳಿ ನೀಡುತ್ತಿರುವ ಸರ್ಕಾರಕ್ಕೆ ಧನ್ಯವಾದಗಳು. ಉಳಿದ ಹಣವನ್ನೂ ತ್ವರಿತವಾಗಿ ನೀಡಲಿ” ಎಂದು ಗ್ರಾಹಕರು ಮನವಿ ಮಾಡಿದ್ದಾರೆ.
ಬೆಂಗಳೂರು ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಜನರಲ್ಲಿ ಆಸೆ ತೋರಿಸಿ, ಹಲವರನ್ನು ಹೂಡಿಕೆಗೆ ಪ್ರೇರೇಪಿಸಲಾಗಿತ್ತು. ಹಲವರು ಅದನ್ನು ನಂಬಿ ಹೂಡಿಕೆ ಮಾಡಿದ್ದರು. ಬರೋಬ್ಬರಿ ಒಟ್ಟು 4,000 ಕೋಟಿ ರೂ. ಹಣವನ್ನು ಹೂಡಿಕೆ ಮೂಲಕ ಸಂಗ್ರಹಿಸಿದ್ದ ಐಎಂಎ ಕಂಪನಿ, ಗ್ರಾಹಕರಿಗೆ ವಂಚಿಸಿತ್ತು.
ವಂಚನೆ ಬೆಳಕಿಗೆ ಬಂದ ಬಳಿಕ ಗ್ರಾಹಕರು ಬೆಂಗಳೂರಿನ ಐಎಂಎ ಕಂಪನಿ ಎದುರು ಪ್ರತಿಭಟನೆಗಳನ್ನು ನಡೆಸಿದ್ದರು. ಆರೋಪಿ ಮನ್ಸೂರ್ ಅಲಿಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು.
ವಂಚನೆಯ 4,000 ಕೋಟಿ ರೂ. ಹಣದಲ್ಲಿ ಸದ್ಯ ಆಭರಣಗಳ ಹರಾಜಿನಿಂದ 68 ಕೋಟಿ ರೂ. ಸಂಗ್ರಹಿಸಲಾಗಿದ್ದು, ಗ್ರಾಹಕರಿಗೆ ಸ್ವಲ್ವ ಪ್ರಮಾಣದ ಹಣವನ್ನು ವಿತರಣೆ ಮಾಡಲಾಗಿದೆ.