ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ತ್ರಿವಳಿ ತಲಾಖ್ ಹೇಳಿ ದೂರವಿಟ್ಟಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಇಲ್ಲೆಯ ಮಂಗಳೂರಿನ ದೇರಳಕಟ್ಟೆ ಅಸೈಗೊಳಿ ನಿವಾಸಿ ಅಬ್ದುಲ್ ಕರೀಂ ಬಂಧಿತ ವ್ಯಕ್ತಿ. ಆತ ತನ್ನ ಪತ್ನಿಗೆ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ, ಹಲ್ಲೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಆತ ತನ್ನ ಪತ್ನಿಗೆ ತ್ರಿವಳಿ ತಲಾಖ್ ಹೇಳಿ ಸಂಬಂಧ ಕಳೆದುಕೊಂಡಿದ್ದ. ಇದರಿಂದ ಮನನೊಂದ ಆತನ ಪತ್ನಿ ಕರೀಂ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮಂಗಳವಾರ ರಾತ್ರಿ ಆತನನ್ನು ಬಂಧಿಸಿದ್ದಾರೆ.
ಆರೋಪಿ ಕರೀಂನನ್ನು ಬುಧವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದೆ. ಮೂರನೇ ಜೆಎಂಎಫ್‌ಸಿ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯ ವಿರುದ್ದ ವರದಕ್ಷಿಣೆ ನಿಷೇಧ ಕಾಯ್ದೆ ಸೆಕ್ಷನ್ 3, 4, ಮತ್ತು ಐಪಿಸಿ ಸೆಕ್ಷನ್ 323, 498A, 504, 506 ಹಾಗೂ ಮುಸ್ಲಿಂ ಮಹಿಳಾ ರಕ್ಷಣಾ ಕಾಯ್ದೆ ಸೆಕ್ಷನ್ 4ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.