ಹುಬ್ಬಳ್ಳಿಯ ಪೂರ್ವ ವಿಭಾಗದ ಶಾಸಕ ಪ್ರಸಾದ ಅಬ್ಬಯ್ಯ ಅವರು ನಗರವನ್ನು ಸ್ವಚ್ಛಗೊಳಸುವ ಪೌರ ಕಾರ್ಮಿಕರ ವಿಶ್ರಾಂತಿಗಾಗಿ ಭೀಮಾಶ್ರಯ ಎಂಬ ಕೊಠಡಿಯನ್ನು ನಿರ್ಮಿಸಿದ್ದಾರೆ. ಇದೇ ಮಾದರಿಯಲ್ಲಿ ಗದಗ ಪಟ್ಟಣದಲ್ಲಿ ‘ಭೀಮಾಶ್ರಮ’ ಕೊಠಡಿ ನಿರ್ಮಿಸಬೇಕು ಎಂದು ಹೋರಾಟಗಾರ ಮುತ್ತು ಬಿಳಿಯಲಿ ಆಗ್ರಹಿಸಿದ್ದಾರೆ.
ಗದಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಗದಗ ನಗರದಲ್ಲಿ ನಡೆದ ಕರ್ನಾಟಕ ಸುವರ್ಣ ಮಹೋತ್ಸವ 50ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಆ ವಿಜೃಂಭಣೆಗೆ ಮೂಲ ಕಾರಣ, ಪೌರ ಕಾರ್ಮಿಕರು. ಅವರು ಸತತ ಒಂದು ತಿಂಗಳಿನಿಂದ ಇಡೀ ನಗರವನ್ನು ಸ್ವಚ್ಛಗೊಳಸಿ ಗದಗ ನಗರದ ಮೆರುಗನ್ನ ಬದಲಾಯಿಸಿದ್ದಾರೆ. ಮೂರು ದಿನಗಳು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಕನಿಷ್ಠ ಪಕ್ಷ ವೇದಿಕೆಯಲ್ಲಾದರೂ ನಮ್ಮ ಪೌರ ಕಾರ್ಮಿಕರಿಗೆ ಅಭಿನಂದನೆಯ ಮಾತುಗಳನ್ನಾಡಿದ್ದರೂ ಸಾಕಾಗಿತ್ತು. ಅದ್ಯಾವುದು ಆಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಪೌರ ಕಾರ್ಮಿಕರಿಗೆ ಸುರಕ್ಷಿತ ಪರಿಕರಗಳನ್ನ ಕೊಡದೆ, ಅವರನ್ನು ದುಡಿಸಿಕೊಳ್ಳುತ್ತಿರುವುದರಿಂದ ಅನೇಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕನಿಷ್ಠ ಮೂರು ತಿಂಗಳಿಗೊಮ್ಮೆ ಆರೊಗ್ಯ ತಪಾಸಣೆ ಮಾಡಬೇಕು. ಭೀಮಾಶ್ರಯ ಕೊಠಡಿ ನಿರ್ಮಾಣ ಮಾಡುವುದರಿಂದ ಅಲ್ಲಿ ಪೌರಕಾರ್ಮಿಕರು ವಿಶ್ರಾಂತಿ ತೆಗದುಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಈಗಲಾದರೂ ಜಿಲ್ಲಾಡಳಿತ ದಲಿತ, ಅಲ್ಪಸಂಖ್ಯಾತ ಹಾಗೂ ಬಡವರ ಮೇಲೆ ವಿಶೇಷ ಕಾಳಜಿ ಇರುವ ನಮ್ಮ ಸಚಿವರಾದ ಡಾ. ಎಚ್.ಕೆ. ಪಾಟೀಲ್ ಅವರು ನಮ್ಮ ಪೌರ ಕಾರ್ಮಿಕರ ವಿಶ್ರಾಂತಿಗಾಗಿ ಕನಿಷ್ಠ ಎರಡು ಭೀಮಾಶ್ರಯ ಕೊಠಡಿಯನ್ನು ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದಾರೆ.