ಜಿಮ್ಸ್ ನಿರ್ದೇಶಕರಾದ ಬಸವರಾಜ ಬೊಮ್ಮನಹಳ್ಳಿ ಅವರನ್ನು ಸೇವೆಯಿಂದ ವಜಾಗೊಳಿಸಲು ದಲಿಪರ ಸಂಘಟನೆಗಳ ಒಕ್ಕೂಟ ಮತ್ತು ಮಾನವ ಬಂದುತ್ವ ವೇದಿಕೆ ಸಹಯೋಗದಲ್ಲಿ ಶಿರಹಟ್ಟಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.
ಮನವಿ ಸಲ್ಲಿಸಿ ಮಾತನಾಡಿದ ದಲಿತಪರ ಮುಖಂಡ ದೇವರಾಜ ಕಟ್ಟಿಮನಿ, “ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗದಗದ ಜಿಮ್ಸ್ ಪಕ್ಕದಲ್ಲಿರುವ, ಆಸ್ಪತ್ರೆಯ ಉದ್ಘಾಟನೆಯ ಸಲುವಾಗಿ ಆಗಮಿಸಿದಾಗ, ಅವರಿಗೆ ಬಿ.ಆರ್. ಅಂಬೇಡ್ಕರವರ ಭಾವಚಿತ್ರ ನೀಡಲು ದಲಿತ ಸಿಬ್ಬಂದಿಗಳು ಹೋದಾಗ, ಜಿಮ್ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ ಅವರು ದಲಿತ ಸಮುದಾಯವನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಅಪಚಾರ, ಪದಗಳಿಂದ ಗದರಿಸಿ ಹೊರಗೆ ಹೋಗುವಂತೆ ಬೆದರಿಸಿದ್ದಾರೆ” ಎಂದರು.
“ನೀವು ಈ ಕಾರ್ಯಕ್ರಮದಲ್ಲಿ ಅಂತಹ ಯಾವುದೇ ಫೋಟೋವನ್ನು ಸಿದ್ದರಾಮಯ್ಯನವರಿಗೆ ಕೊಡತಕ್ಕದ್ದಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಸಮುದಾಯದವರಿಗೆ ಅನ್ಯಾಯ ಮತ್ತು ಅಪಚಾರವನ್ನು ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಈ ಮೂಲಕ ಅಗ್ರಹಿಸುತ್ತಿದ್ದೇವೆ, ಇಲ್ಲವಾದಲ್ಲಿ ಗದಗ ಜಿಲ್ಲಾದ್ಯಂತ ದಲಿತ ಸಮುದಾಯದವರೆಲ್ಲ ಸೇರಿಕೊಂಡು ತಮ್ಮ ಕಚೇರಿಯ ಮುಂದೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ” ಎಂದರು.
ಈ ಸಂದರ್ಭದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟ ಮತ್ತು ಮಾನವ ಬಂದುತ್ವ ವೇದಿಕೆಯ ಕಾರ್ಯಕರ್ತರು, ದಲಿತಪರ ಹೋರಾಟಗಾರರು, ಮತ್ತಿತರರಿದ್ದರು.