ಬೆಂಗಳೂರಿನಲ್ಲಿ ನವೆಂಬರ್ 21ರಂದು ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಂದು 8 ಲಕ್ಷ ಮೌಲ್ಯದ ಮೀನು ಮಾರಾಟ ಮಾಡುವ ‘ಮತ್ಸ್ಯ ವಾಹನ’ಗಳನ್ನು ವಿತರಿಸಲಿದ್ದೇವೆ. ಒಟ್ಟು 300 ವಾಹನಗಳನ್ನು ವಿತರಿಸುವ ಉದ್ದೇಶವಿದ್ದು, ಈ ಪೈಕಿ ಬೆಂಗಳೂರಿಗೆ 150 ವಾಹನ ನೀಡುತ್ತಿದ್ದೇವೆ ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವ ಮಂಕಾಳ್ ವೈದ್ಯ ತಿಳಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೀನುಗಾರಿಕೆ, ಬಂದರು ಮತ್ತು ಜಲಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಮತ್ತು ಇಲಾಖಾ ಅಧಿಕಾರಿಗಳ ಜೊತೆ ಸಮಾಲೋಚನೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ನ.21ರಂದು ವಿಶ್ವ ‘ಮತ್ಸ್ಯ ದಿನ’ ಪ್ರಯುಕ್ತ ಬೆಂಗಳೂರಿನಲ್ಲಿ ‘ಮತ್ಸ್ಯ ವಾಹನ’ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಮೂಲಕ ಬೆಂಗಳೂರಿನ ಮೀನು ಖಾದ್ಯ ಪ್ರಿಯರ ಮನೆಗೆ ಬಾಗಿಲಿಗೆ ಕರಾವಳಿ ಮೀನು ಮಾರಾಟ ಮಾಡಲಾಗುವುದು. ಫ್ರಿಜ್, ತೂಕದ ಯಂತ್ರ, ಕಟ್ಟಿಂಗ್ ಮೆಷಿನ್ ಸಹಿತ ಮತ್ತಿತರ ಅನುಕೂಲತೆಯುಳ್ಳ ಸುಸಜ್ಜಿತವಾದ ಎಂಟು ಲಕ್ಷ ರೂ. ವೆಚ್ಚದ ವಾಹನಗಳಲ್ಲಿ ಕರಾವಳಿಯ ತರಹೇವಾರಿ ಮೀನುಗಳ ಮಾರಾಟದ ವ್ಯವಸ್ಥೆಯಿರುತ್ತದೆ ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.
ಇಂದು ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಕೊಠಡಿಯಲ್ಲಿ,ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೀನುಗಾರಿಕೆ, ಬಂದರು ಮತ್ತು ಜಲಸಾರಿಗೆ ಇಲಾಖೆಗೆ ಸಂಬಂದಿಸಿದಂತೆ ಇಲಾಖಾ ವಿಷಯಗಳ ಕುರಿತು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರು ಮತ್ತು ಇಲಾಖಾ ಅಧಿಕಾರಿಗಳ ಜೊತೆ ಸಮಾಲೋಚನೆ ಸಭೆ ನಡೆಸಲಾಯಿತು pic.twitter.com/V3d7HIgoDK
— Mankal S Vaidya • ಮಂಕಾಳ.ಎಸ್.ವೈದ್ಯ (@MankalSVaidya) November 9, 2023
ಆಸಕ್ತರು ಅರ್ಜಿ ಸಲ್ಲಿಸಿದರೆ ಎರಡು ಲಕ್ಷ ರೂ. ಭದ್ರತಾ ಠೇವಣಿ, ಮಾಸಿಕ ಮೂರು ಸಾವಿರ ರೂ. ನಿರ್ವಹಣಾ ವೆಚ್ಚ ಭರಿಸುವ ಷರತ್ತಿನ ಮೇಲೆ ಈ ವಾಹನಗಳನ್ನು ವಿತರಿಸಲಾಗುತ್ತದೆ. ಬೇಡವೆಂದಾಗ ವಾಹನಗಳನ್ನು ಹಿಂದಿರುಗಿಸಿ, ಭದ್ರತಾ ಠೇವಣಿ ವಾಪಸ್ ಪಡೆಯಲು ಅವಕಾಶವಿದೆ. ಮೊದಲ ಹಂತದಲ್ಲಿ 150 ಮತ್ಸ್ಯ ವಾಹನಗಳು ಬೆಂಗಳೂರಿನಲ್ಲಿ ಸಂಚರಿಸಿ ಮೀನುಗಳನ್ನು ಮಾರಾಟ ಮಾಡಲಿದೆ ಎಂದರು.
ಈ ಯೋಜನೆಯ ಭಾಗವಾಗಿ ಸರ್ಕಾರ ಭದ್ರತಾ ಠೇವಣಿಯ ಹೆಸರಿನಲ್ಲಿ ಫಲಾನುಭವಿಗಳಿಂದ 2 ಲಕ್ಷ ರೂ. ಮುಂಗಡ ಹಣ ಪಡೆದುಕೊಳ್ಳುತ್ತದೆ. ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಂದ ಒಂದೂವರೆ ಲಕ್ಷ ರೂ. ಡೆಪಾಸಿಟ್ ತೆಗೆದುಕೊಳ್ಳುತ್ತೇವೆ ಎಂದರು.
ಕಾರವಾರ, ಮಂಗಳೂರಲ್ಲಿ ಹೊಸ ಬಂದರು ನಿರ್ಮಾಣ
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಾರಿಕೆ, ಒಳನಾಡು ಜಲಸಾರಿಗೆ ಮತ್ತು ಬಂದರುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಇದೇ ವೇಳೆ ಸಚಿವ ಮಂಕಾಳ್ ವೈದ್ಯ ಹೇಳಿದ್ದಾರೆ.
ಕರಾವಳಿಯ ಮೂರು ಜಿಲ್ಲೆಗಳ ಒಳನಾಡು ಜಲಸಾರಿಗೆ, ಮೀನುಗಾರಿಕೆ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಚರ್ಚೆ ಮಾಡಲಾಗಿದೆ. ಇದೇ ವೇಳೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬೋಟ್‌ಗಳ ನಿಲುಗಡೆಗೆ ಅವಕಾಶ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿಗೂ ಆದ್ಯತೆ ನೀಡುವ ಕುರಿತು ಸಮಾಲೋಚನೆ ನಡೆಸಲಾಗಿದೆ. ಕಾರವಾರ ಮತ್ತು ಮಂಗಳೂರಿನಲ್ಲಿ ಹೊಸದಾಗಿ ಬಂದರು ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ವಿಸ್ತೃತ ಯೋಜನಾ ವರದಿ ಸಿದ್ಧವಾದ ನಂತರ ಅಂದಾಜು ವೆಚ್ಚದ ಬಗ್ಗೆ ತಿಳಿಯಲಿದೆ. ಒಂದು ಕೋಟಿ ರೂ. ನಿಂದ ಸಾವಿರ ಕೋಟಿ ರೂ. ವೆಚ್ಚ ಗಾತ್ರದ ಬಂದರುಗಳಿವೆ. ಮೂರು ಜಿಲ್ಲೆಗಳಲ್ಲಿ ಒಟ್ಟು 13 ದ್ವೀಪ ಗುರುತಿಸಲಾಗಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳಲು ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.
ಮೀನುಗಾರರಿಗೆ ನೀಡಲಾಗುತ್ತಿದ್ದ ವಾರ್ಷಿಕ ಡಿಸೇಲ್ ಪ್ರಮಾಣವು 1.50 ಲಕ್ಷ ಕಿಲೋ ಲೀಟರ್‌ನಿಂದ ಎರಡು ಲಕ್ಷ ಕಿಲೋ ಲೀಟರ್‌ಗೆ ಹೆಚ್ಚಳ ಮಾಡುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಲಾಗಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು. ಇನ್ನು, ನಿರಂತರ ಮನವಿ ಮಾಡಿದರೂ ಕೇಂದ್ರ ಸರ್ಕಾರ ವಾರ್ಷಿಕ ಸೀಮೆ ಎಣ್ಣೆ ಹಂಚಿಕೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಮಾಸಿಕ 200 ಲೀಟರ್ ವೈಟ್ ಪೆಟ್ರೋಲ್ ಅನ್ನು ಲೀಟರ್‌ಗೆ 35 ರೂ. ನಂತೆ ಸಬ್ಸಿಡಿ ದರದಲ್ಲಿ 10 ತಿಂಗಳ ಕಾಲ ವಿತರಿಸಲಿದ್ದು, 300 ಲೀಟರ್ ವರೆಗೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.