ಕುಟುಂಬ ರಾಜಕಾರಣದ ಬಗ್ಗೆ ಈಗ ಮಾತನಾಡಿದರೆ ತಪ್ಪಾಗುತ್ತದೆ. ಎಲ್ಲೆಲ್ಲಿಗೊ ಕನೆಕ್ಟ್ ಆಗುತ್ತದೆ. ಕುಟುಂಬ ರಾಜಕಾರಣದ ಬಗ್ಗೆ ಈಗ ಉತ್ತರ ನೀಡುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿದೆ. ರಾಜಕೀಯ ವಲಯದಲ್ಲಿ ಈಗ ಕುಟುಂಬ ರಾಜಕಾರಣದ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸಿ.ಟಿ ರವಿ ಅವರಿಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. “ನಾನು ಪಕ್ಷದ ಕಟ್ಟಾಳು. ಪಕ್ಷದ ನಿರ್ಣಯದ ವಿರುದ್ದ ಮಾತನಾಡುವುದಿಲ್ಲ. ಮಾತನಾಡಿಯೂ ಇಲ್ಲ. ಹೈಕಮಾಂಡ್ ನಿರ್ಣಯ ಸರಿಯಿಲ್ಲ ಅನಿಸಿದರೆ, ಅದನ್ನು ವ್ಯಕ್ತಪಡಿಸಲು ವೇದಿಕೆ ಇದೆ” ಎಂದು ಅವರು ಹೇಳಿದ್ದಾರೆ.
ಇನ್ನು ತಮಗೆ ಪಕ್ಷದಲ್ಲಿ ಉತ್ತಮ ಹುದ್ದೆ ಹಾಗೂ ಅಧಿಕಾರದ ಬಗ್ಗೆ ಪರೋಕ್ಷವಾಗಿ ಮಾತನಾಡಿರುವ ಅವರು, “ನಾನೇನು ಸನ್ಯಾಸಿಯಲ್ಲ” ಎಂದಿದ್ದಾರೆ.
“ನಾನು ಯಾವುದೇ ಹುದ್ದೆಯನ್ನು ಕೇಳಿಲ್ಲ. ಹೀಗಾಗಿ ಯಾವುದೇ ಅಸಮಾಧಾನ ಇಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವು ಜವಾಬ್ದಾರಿಯಾಗಿದೆ. ಅದು ಅಧಿಕಾರ ಅಲ್ಲ. ರಾಜಕಾರಣ ಫುಟ್ ಬಾಲ್ ರೀತಿ. ಎಲ್ಲರೂ ಟೀಮ್ ವರ್ಕ್ ಮಾಡಬೇಕು. ಸಾಮಾನ್ಯ ಕಾರ್ಯಕರ್ತನಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಕೆಲಸ ಮಾಡಿದರೆ ತಂಡ ಗೆಲ್ಲುತ್ತದೆ” ಎಂದು ಹೇಳಿದ್ದಾರೆ.