ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಜನರು ಸಿದ್ಧರಾಗಿದ್ದಾರೆ. ಸುಪ್ರೀಂಕೋರ್ಟ್ ಹಸಿರು ಪಟಾಕಿ ಮಾತ್ರ ಬಳಕೆ ಮಾಡಬೇಕು ಎಂದು ಆದೇಶಿಸಿದೆ. ಈ ಬೆನ್ನಲ್ಲೆ, ಬಿಬಿಎಂಪಿ ಮತ್ತು ನಗರ ಪೊಲೀಸ್ ಇಲಾಖೆ, ನಗರದ ನಾಗರಿಕರಿಗೆ ಹಸಿರು ಪಟಾಕಿ ಬಳಸಿ ಪರಿಸರ ಸಂರಕ್ಷಿಸಿ ಹಾಗೂ ಪಟಾಕಿ ಅವಘಡಗಳಿಂದ ದೂರವಿರಿ ಎಂದು ಸೂಚಿಸಿದೆ. ಪಟಾಕಿ ಹಬ್ಬದ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ, ನಗರದ ಮಿಂಟೋ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸಲು ಸಜ್ಜಾಗಿವೆ.
ಪಟಾಕಿ ಹೊಡೆಯುವ ಸಂದರ್ಭದಲ್ಲಿ ಕಣ್ಣಿಗೆ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆಯ ಸಿಬ್ಬಂದಿ ಮುಂದಿನ ಒಂದು ವಾರ ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದಾರೆ.
ಪಟಾಕಿ ಅಂಟಿಸುವ ಸಂದರ್ಭದಲ್ಲಿ ಉಂಟಾಗುವ ಅವಘಡಗಳಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಮಿಂಟೋ ಕಣ್ಣಿನ ಆಸ್ಪತ್ರೆ ಸಿದ್ಧವಾಗಿದೆ. ಚಿಕಿತ್ಸೆಗೆ ಬೇಕಾದ ಔಷಧಿ, ಐ ಡ್ರಾಪ್ಸ್ ಸೇರಿದಂತೆ ಎಲ್ಲವನ್ನು ವಾರ್ಡ್‌ಗಳಲ್ಲಿ ಶೇಖರಣೆ ಮಾಡಿಟ್ಟಿದೆ. ಜತೆಗೆ, ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆಗೆ ಬರುವ ಮಕ್ಕಳಿಗಾಗಿ ಆಸ್ಪತ್ರೆ 15 ಬೆಡ್‌ಗಳಿರುವ ಪ್ರತ್ಯೇಕ ವಾರ್ಡ್ ಆರಂಭಿಸಿದೆ. ಯುವಕರಿಗೆ 10 ಬೆಡ್, ಮಹಿಳೆಯರಿಗೆ 10 ಬೆಡ್ ಸೇರಿದಂತೆ ಒಟ್ಟು 35 ಬೆಡ್‌ಗಳನ್ನ ಮೀಸಲಿರಿಸಿದೆ.
ತುರ್ತು ಸಹಾಯವಾಣಿ – 9481740137, 08026707176 ಶುರು ಮಾಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೌಡಿಶೀಟರ್ ಸಹದೇವ ಹತ್ಯೆ ಪ್ರಕರಣ: ಎಂಟು ಮಂದಿ ಬಂಧನ
ಯಾವುದೇ ತುರ್ತು ಸರ್ಜರಿ ಹಾಗೂ ಗಾಯಗೊಂಡ ರೋಗಿಗೆ ಚಿಕಿತ್ಸೆ ನೀಡಲು ಅದೇ ಬ್ಲಾಕ್ ನಲ್ಲಿಯೇ ಆಪರೇಷನ್ ಬ್ಲಾಕ್ ಕೂಡಾ ಇದ್ದು, ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕಣ್ಣಿನ ಗಾಯಗಳ ಜತೆಗೆ ಮುಖ ಸೇರಿದಂತೆ ದೇಹದ ಇತರೆ ಭಾಗದಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಮೀಸಲಿಡಲು ಕೇಳಿಕೊಳ್ಳಲಾಗಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜು ಜಿ. ಹೇಳಿದ್ದಾರೆ.
ಪಟಾಕಿ ಅಂಟಿಸುವ ಸಮಯದಲ್ಲಿ ಕಣ್ಣಿಗೆ ಮಾತ್ರ ಗಾಯವಲ್ಲದೇ, ಪಟಾಕಿಗಳಿಂದ ಸುಟ್ಟು ಗಾಯಗಳಾಗಿದ್ದರೆ, ತುರ್ತು ಚಿಕಿತ್ಸೆ ನೀಡುವ ಸಲುವಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ ವಾರ್ಡ್ ತೆರೆಯಲಾಗುತ್ತದೆ.
ಪಟಾಕಿಯಿಂದ ಗಾಯಗೊಂಡಾಗ ಏನ್ ಮಾಡಬಾರದು?
- ಪಟಾಕಿಯಿಂದ ಕಣ್ಣಿಗೆ ಗಾಯವಾದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ.
- ಪಟಾಕಿಯ ದೊಡ್ಡ ಕಣವೇನಾದರೂ ಒಳಗೆ ಸಿಕ್ಕಿಹಾಕಿಕೊಂಡಿದ್ದರೆ ಬಲವಂತವಾಗಿ ಎಳೆದು ತೆಗೆಯಲು ಪ್ರಯತ್ನಿಸಬೇಡಿ.
- ಕಣ್ಣುಗಳನ್ನು ಮುಚ್ಚಿಸಿ ಕೂಡಲೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ.
- ಗಾಯದ ಜಾಗವನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ಅದ್ದಿಸಿ. ಆದರೆ, ಐಸ್ ನೀರು ಬಳಸಬೇಡಿ.
- ಗಾಯ ಸ್ಥಳ ಒಣಗಲು ಬಿಡಿ. ಶುದ್ಧವಾದ ಬಟ್ಟೆಯಿಂದ ಗಾಯವನ್ನು ಮುಚ್ಚಬೇಕು.
ಪಟಾಕಿ ಹಚ್ಚುವ ಮುನ್ನ ಮುನ್ನೆಚ್ಚರಿಕೆ ವಹಿಸಿ
- ಪಟಾಕಿ ಸಿಡಿಸುವಾಗ ಉದ್ದನೆಯ ಕಡ್ಡಿ ಬಳಸಿ. ಜತೆಗೆ, ಪಟಾಕಿ ಬಾಕ್ಸ್ ಮೇಲೆ ಇರುವ ಎಚ್ಚರಿಕೆಗಳನ್ನು ಓದಿಕೊಳ್ಳಿ.
- ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಮಾರ್ಗದರ್ಶನ ಮಾಡಬೇಕು.
- ಪಟಾಕಿ ಹಚ್ಚುವ ವೇಳೆ, ಪಕ್ಕದಲ್ಲಿ ಒಂದು ಬಕೆಟ್ ನೀರು ಇಟ್ಟುಕ್ಕೊಳ್ಳಿ.
- ಪಟಾಕಿ ಹಚ್ಚುವ ಸಮಯದಲ್ಲಿ ಕಾಟನ್ ಬಟ್ಟೆ ಬಳಸಿ. ಸಿಂಥೆಟಿಕ್ ಅಥವಾ ಬೇಗನೆ ಸುಡುವ ಸಡಿಲ ಬಟ್ಟೆ ಧರಿಸಬೇಡಿ.
- ಅರೆಬರೆ ಸುಟ್ಟ ಪಟಾಕಿಯನ್ನು ಕೈಯಲ್ಲಾಗಲಿ, ಕಾಲಲ್ಲಾಗಲಿ ನಂದಿಸುವ ಪ್ರಯತ್ನ ಮಾಡಬಾರದು.
- ಜನದಟ್ಟಣೆಯ ಪ್ರದೇಶ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು ಹಾಗೂ ಪೆಟ್ರೋಲ್ ಬಂಕ್ ಬಳಿ ಪಟಾಕಿ ಸುಡಬಾರದು.
- ಪೋಷಕರು ಮತ್ತು ಮಕ್ಕಳು ಎಚ್ಚರಿಕೆಯಿಂದ ಪಟಾಕಿ ಸಿಡಿಸಿ
- ಕಣ್ಣಿನ ಸಮಸ್ಯೆ ಇರುವವರು ಪಟಾಕಿಯಿಂದ ದೂರ ಇರಿ, ಸುರಕ್ಷಿತವಾಗಿರಿ.
ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಪಟಾಕಿ ಸಿಡಿದು 7 ವರ್ಷದ ಮಗು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳು ಮಗುವನ್ನು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿಂಟೋ ಮತ್ತು ವಿಕ್ಟೋರಿಯ ಹಾಸ್ಪಿಟಲ್ ಗಳನ್ನ ಯಾಕೆ.?. ಈ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಮತ್ತು ಬೆಂಗಳೂರು ಜಿಲ್ಲಾಡಳಿತ ಸೂಚಿಸಿದೆ… ಯಾಕೆ? ಬಡ ಮಕ್ಕಳಿಗೆ ಬಡ ಜನರಿಗೆ ದೀಪಾವಳಿ ಹಬ್ಬ ವಲ್ಲವೇ??? ಅವರು ಸಿಡಿಸುವ ಪಟಾಕಿ ಸಣ್ಣ ದೋ ದೊಡ್ಡದೋ ಆದರೂ ಉಳ್ಳವರ ಮತ್ತು ಇಲ್ಲದವರ ಜ್ಞಾನೇಂದ್ರಿಯ ಗಳು ಒಂದೇ ತಾನೇ….ಈ ವಿಚಾರ ವಾಗಿ ಜಿಲ್ಲಾಡಳಿತ ತಪ್ಪು ಮಾಡುತ್ತಿದೆ. ಯಾಕೆ ನಮ್ಮ ಸರ್ಕಾರಿ ಆಸ್ಪತ್ರೆ ಗಳಲ್ಲಿ ನೂರಿತ ವೈದ್ಯರು ಗಳು ಇಲ್ಲವೇ? ಇದರಲ್ಲೂ ಆದಾಯ ಮಾಡಲು ನಿಂತಿದೆಯೇ??? ದೀಪಾವಳಿ ಹಬ್ಬ ಉಳ್ಳವರಿಗೆ ಮಾತ್ರ ಸೀಮಿತ ವಲ್ಲ ಇಲ್ಲದವರಿಗೂ ಕೂಡ ಹಬ್ಬ…..