ಬಿಜೆಪಿಗೆ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ ವಿಜಯೇಂದ್ರ ಅವರನ್ನು ನೇಮಕ ಮಾಡುವ ಮೂಲಕ ಬಿ.ಎಲ್ ಸಂತೋಷ್‌ಗೆ ಸ್ಪಷ್ಟ ಸಂದೇಶ ನೀಡಿದೆ. ಸಂತೋಷ್ ಅವರಿಗೆ ನೀವು ಕೇಶವ ಕೃಪಾದಲ್ಲೇ ಇರಿ ಎಂದು ಹೈಕಮಾಂಡ್ ಸಂದೇಶ ಕಳುಹಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಜಯೇಂದ್ರ ನೇಮಕದ ಮೂಲಕ ಬಿ.ಎಲ್. ಸಂತೋಷ್ ಅವರ ತಂತ್ರಗಾರಿಕೆ ತಮಗೆ ಸಂತೋಷ ತಂದಿಲ್ಲವೆಂದು ಹೈಕಮಾಂಡ್ ಸಂದೇಶ ಕೊಟ್ಟಿದೆ” ಎಂದು ಹೇಳಿದ್ದಾರೆ.
“ವಿಜಯೇಂದ್ರ ನನಗಿಂತ ನಾಲ್ಕೈದು ವರ್ಷ ದೊಡ್ಡವರು. ಅವರಿಗೆ ಒಳ್ಳೆಯದಾಗಲಿ. ಅವರ ಬಗ್ಗೆ ವೈಯಕ್ತಿಕವಾಗಿ ನಾನು ಏನು ಹೇಳುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಂಡಿದೆ. ಆ ಪಕ್ಷಕ್ಕೆ ಜೀವ ತುಂಬುವ ಶಕ್ತಿಯನ್ನ ಅವರಿಗೆ ಕೊಡಲಿ” ಎಂದಿದ್ದಾರೆ.
“ಕುಟುಂಬ ರಾಜಕಾರಣ ತೊಲಗಬೇಕು. ಓಲೈಕೆ ರಾಜಕಾರಣ, ಭ್ರಷ್ಟಾಚಾರವನ್ನ ನಾವು ಸಹಿಸಲ್ಲ ಅಂತ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ಈಗ ವಿಜಯೇಂದ್ರ ಆಯ್ಕೆಯನ್ನು ಏನೆಂದು ಕರೆಯಬೇಕು. ನಾನು ಏನೇ ಮಾಡಿದರೂ ಖರ್ಗೆ ಮಗ ಎನ್ನುತ್ತಾರೆ. ನಾನು ಯುವ ಕಾಂಗ್ರೆಸ್ ಕಟ್ಟಿ ಶಾಸಕನಾದೆ. ಆದರೂ, ಖರ್ಗೆ ಮಗ ಎಂದೇ ಹೇಳಿದರು. ಕುಟುಂಬ ರಾಜಕಾರಣ ಎಂದರು. ಈಗ ಯಡಿಯೂರಪ್ಪ ಮಗ ಬಿಜೆಪಿ ರಾಜ್ಯಾಧ್ಯಕ್ಷ ಆಗಿದ್ದಾರೆ. ಕುಟುಂಬ ರಾಜಕಾರಣದ ವಿರುದ್ಧದ ಮೋದಿ, ಅಮಿತ್ ಶಾ ಮಾತುಗಳು ಏನಾದವು” ಎಂದು ಪ್ರಶ್ನಿಸಿದ್ದಾರೆ.