ರಾಜ್ಯಾಧ್ಯಕ್ಷನ ಆಯ್ಕೆಯ ಬೆನ್ನಲ್ಲೇ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧದ ಬೆಳವಣಿಗೆಗಳು ಬಿರುಸುಗೊಂಡಿವೆ. ವಿಪಕ್ಷ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎಂದು ಮಲ್ಲೇಶ್ವರ ಕ್ಷೇತ್ರದ ಶಾಸಕ ಡಾ. ಸಿ ಎಸ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಅಶ್ವತ್ಥನಾರಾಯಣ ಅವರು, ‘ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರು ಆಯ್ಕೆಯಾಗಿರುವುದನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಹಿರಿಯರು ಕೂಡ ಆಕಾಂಕ್ಷಿಗಳಿದ್ದರು. ಆದರೂ ಹೈಕಮಾಂಡ್ ಯುವಕರಾದ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದೆ. ಹೈಕಮಾಂಡ್ ಆಯ್ಕೆಗೆ ನಾವೆಲ್ಲ ಬದ್ಧರು. ಇದರ ನಡುವೆ ಸೋಮಣ್ಣ ಪ್ರಭಾವಿ ನಾಯಕರು, ಅವರಿಗೆ ಎಲ್ಲ ಅರ್ಹತೆ ಇದೆ. ಜೊತೆಗೆ ಸಿ ಟಿ ರವಿ ಪಕ್ಷದ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಒಬ್ಬರಿಗೆ ಒಂದು ಹುದ್ದೆ ಮಾತ್ರ ಕೊಡಲು ಸಾಧ್ಯ’ ಎಂದರು.
ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯದ ಎಲ್ಲ ಸ್ಥಾನಗಳನ್ನೂ ಗೆಲ್ಲಲಿದ್ದೇವೆ. ಮೋದಿಯವರು ಮತ್ತೆ ಪ್ರಧಾನಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದರು.
ಈ ಸುದ್ದಿ ಓದಿದ್ದೀರಾ: ಪ್ಯಾಲೇಸ್ತೀನ್‌ನಲ್ಲಿ ಇಸ್ರೇಲ್ ದಾಳಿ ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ
ಈ ವೇಳೆ ಕಾಂಗ್ರೆಸ್ ಅನ್ನು ಕುಟುಕಿದ ಅಶ್ವತ್ಥನಾರಾಯಣ, ‘ಚುನಾವಣೆಯ ಬಳಿಕ ನಾವೇನೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವುದಿಲ್ಲ. ಅವರ ಪಕ್ಷದವರಿಂದಲೇ ಸರ್ಕಾರ ಬೀಳಲಿದೆ. ಅವರ ಪಕ್ಷದಲ್ಲೇ ಸಾಕಷ್ಟು ಒಡಕುಗಳಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳ ದಂಡೇ ಇದೆ.
ನಾನು ಸಿಎಂ ಆಗುತ್ತೇನೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪಕ್ಷದಲ್ಲಿ ಅಸಮಾಧಾನಗೊಂಡವರೂ ಇದ್ದಾರೆ. ಅವರೆಲ್ಲ ಸಿದ್ದರಾಮಯ್ಯ ಅವರನ್ನು ಉಡೀಸ್ ಮಾಡುತ್ತಿದ್ದು, ಮಂತ್ರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಅಂತಹವರನ್ನು ಸಚಿವ ಸಂಪುಟದಿಂದ ಹೊರ ಹಾಕಬೇಕು. ಜೊತೆಗೆ ಚಾಮುಂಡೇಶ್ವರಿ ತಾಯಿ ಸಿದ್ದರಾಮಯ್ಯನಿಗೆ ಶಕ್ತಿ ನೀಡಲಿ’ ಎಂದು ಹೇಳಿದರು.