ಒಳಮೀಸಲಾತಿ ವಿಚಾರವಾಗಿ ಪ್ರಧಾನಿ ಮೋದಿಯವರು ಮಾಡಬೇಕಿದ್ದದ್ದು ಈ ಎರಡು ಕೆಲಸಗಳನಷ್ಟೇ. ಆದರೆ ಸಮುದಾಯವನ್ನು ವಂಚಿಸುವ ಮಾತುಗಳನ್ನು ಅವರು ಆಡಿದ್ದು ಅಕ್ಷಮ್ಯ…
ಪಂಚರಾಜ್ಯ ಚುನಾವಣೆಯ ಕಾವು ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ ಮಾದಿಗ ಸಮುದಾಯ ನೆನಪಾದಂತೆ ಕಾಣುತ್ತಿದೆ. ತೆಲಂಗಾಣ ರಾಜ್ಯದಲ್ಲಿ ಒಳಮೀಸಲಾತಿ ವಿಚಾರವಾಗಿ ಅವರು ಮಾತನಾಡಿರುವ ವೈಖರಿಯನ್ನು ನೋಡಿದರೆ, ಮಾದಿಗ ಸಮುದಾಯಕ್ಕೆ ಮಹಾವಂಚನೆಯನ್ನೇ ಮೋದಿ ಮಾಡುತ್ತಿದ್ದಾರೆ ಎನ್ನದೆ ವಿಧಿಯಿಲ್ಲ.
ಸಿಕಂದರಾಬಾದ್‌ನಲ್ಲಿ ನಡೆದ ಮಾದಿಗ ಮೀಸಲು ಹೋರಾಟ ಸಮಿತಿ ರ್‍ಯಾಲಿಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವ ಜೊತೆಗೆ, “ಕರ್ನಾಟಕ, ತೆಲಂಗಾಣ ಸೇರಿದಂತೆ ಹಲವು ಕಡೆ ಒಳಮೀಸಲಾತಿಗಾಗಿ ಒತ್ತಾಯಿಸಲಾಗುತ್ತಿದೆ. ಮಾದಿಗ ಸಮುದಾಯದ ಬೇಡಿಕೆಯನ್ನು ಈಡೇರಿಸಲು ಅಧ್ಯಯನ ಸಮಿತಿ ರಚಿಸಲಾಗುತ್ತದೆ” ಎಂದಿದ್ದಾರೆ. ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಹತಾಷೆಯ ನಾಯಕ ಮಂದಕೃಷ್ಣ ಮಾದಿಗ ಈ ಸಂದರ್ಭದಲ್ಲಿ ಭಾವುಕರಾಗಿ, “ಯಾವುದೇ ಪ್ರಧಾನಿಯೂ ಮಾದಿಗರ ವೇದಿಕೆಯಲ್ಲಿ ಕೂತಿರಲಿಲ್ಲ” ಎಂದಾಗ ಮೋದಿ ಅವರನ್ನು ಅಪ್ಪಿಕೊಂಡಿದ್ದಾರೆ.
ಸಮುದಾಯದ ಭಾವುಕತೆಯನ್ನು, ಹೋರಾಟಗಾರರ ಹತಾಷೆಯನ್ನು ಯಾವುದೇ ರಾಜಕೀಯ ಪಕ್ಷ ಬಳಸಿಕೊಳ್ಳುತ್ತದೆ ಎಂಬುದು ನಿಚ್ಚಳ ಸತ್ಯ. ಆದರೆ ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿ ಮಾತ್ರ ಅಧಿಕಾರದಲ್ಲಿರುವ ಬಿಜೆಪಿ ನಾಯಕರಲ್ಲಿ ಕಾಣುತ್ತಿಲ್ಲ.
“ಒಳಮೀಸಲು ಅಧ್ಯಯನಕ್ಕೆ ಸಮಿತಿ ರಚಿಸುತ್ತೇನೆ” ಎಂದಿರುವ ಮೋದಿಯವರು ಮಾದಿಗ ಸಮುದಾಯದ ಕಿವಿಗೆ ಹೂ ಮುಡಿಸುತ್ತಿದ್ದಾರೆ ಅಷ್ಟೇ ಅಲ್ಲ, ಮಹಾ ವಂಚನೆಯನ್ನೂ ಮಾಡುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಪ್ರಧಾನಿಯಾದವರು ವೇದಿಕೆ ಹಂಚಿಕೊಂಡ ಮಾತ್ರಕ್ಕೆ ನಾವು ಎಲ್ಲವೂ ಆಯಿತೆಂದು ಭಾವಿಸಿದರೆ ತಪ್ಪಾದೀತು.
ಒಳಮೀಸಲಾತಿ ಜಾರಿಗೆ ಬಿಜೆಪಿಗೆ ಬದ್ಧವಾಗಿಲ್ಲ ಎಂಬುದಕ್ಕೆ ಇಡಬ್ಲ್ಯುಎಸ್ ಜಾರಿಯಾದ ರೀತಿಯನ್ನು ಗಮನಿಸಬೇಕಾಗುತ್ತದೆ. ಯಾವುದೇ ಆಗ್ರಹ, ಹೋರಾಟ, ಸಮಿತಿಯ ಶಿಫಾರಸ್ಸು ಇಲ್ಲದೆ ಇದ್ದರೂ 2019ರಲ್ಲಿ ಕ್ಷಿಪ್ರಗತಿಯಲ್ಲಿ ಇಡಬ್ಲ್ಯುಎಸ್ ಜಾರಿಗೆ ತರಲಾಯಿತು. 2019ರ ಜನವರಿ 8 ರಂದು ಲೋಕಭೆಯಲ್ಲಿ, ಜನವರಿ 9ರಂದು ರಾಜ್ಯಸಭೆಯಲ್ಲಿ ಮಂಡನೆಯಾಯಿತು. ಜನವರಿ 12ರಂದು ರಾಷ್ಟ್ರಪತಿಗಳ ಅಂಕಿತ ಬಿದ್ದು ಶಾಸನವಾಗಿ ರೂಪುಗೊಂಡಿತು. ಒಂದೇ ವಾರದೊಳಗೆ ಎಲ್ಲ ಪ್ರಕ್ರಿಯೆಗಳು ಮುಗಿದು ಹೋದವು. ಜೊತೆಗೆ 8 ಲಕ್ಷ ರೂ. ಆದಾಯ ಮಿತಿಯನ್ನು ಇಡಬ್ಲ್ಯುಎಸ್‌ಗೆ ವಿಧಿಸಲಾಯಿತು. ಎಂಟು ಲಕ್ಷ ರೂ. ಆದಾಯ ಮಿತಿ ಹೊಂದಿರುವವರು ಅದು ಹೇಗೆ ಆರ್ಥಿಕವಾಗಿ ಹಿಂದುಳಿದವರು ಎಂಬುದು ಯಾರಿಗೂ ಗೊತ್ತಿಲ್ಲ. ಬಹುಶಃ ಬಿಪಿಎಲ್ ಕಾರ್ಡ್ ಹೊಂದಿರುವವರ ವಾರ್ಷಿಕ ಆದಾಯ ಎರಡು ಲಕ್ಷ ರೂ. ಮೀರಿದರೆ ಹೆಚ್ಚು. (ಮಿಗಿಲಾಗಿ ಇಡಬ್ಲ್ಯುಎಸ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು.)
ಕಳೆದ ಒಂಬತ್ತೂವರೆ ವರ್ಷಗಳಿಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಮಿತ್ರ ಪಕ್ಷಗಳನ್ನು ಹೊರತು ಪಡಿಸಿದರೂ ಬಿಜೆಪಿಗೆ ಪ್ರಚಂಡ ಬಹುಮತವಿದೆ. ಮನಸ್ಸು ಮಾಡಿದ್ದರೆ, ಇಡಬ್ಲ್ಯುಎಸ್ ರೀತಿ ಒಂದೇ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿ ಆಗುತ್ತಿತ್ತು. ಬಿಜೆಪಿ ಸರ್ಕಾರ ಕೇವಲ ಎರಡೇ ಎರಡು ಕೆಲಸ ಮಾಡಿದ್ದರೆ ಸಾಕಿತ್ತು.
ಒಂದನೇ ಕೆಲಸ: ಸಂವಿಧಾನಕ್ಕೆ ತಿದ್ದುಪಡಿ
ಸಂವಿಧಾನ 341ನೇ ವಿಧಿಯು ಪರಿಶಿಷ್ಟ ಜಾತಿಗಳ ಮೀಸಲಾತಿ ಕುರಿತು ಹೇಳುತ್ತದೆ. 341 (1)ರ ಪ್ರಕಾರ ಎಸ್‌ಸಿ ಪಟ್ಟಿಯನ್ನು ರಾಜ್ಯಗಳು ರೂಪಿಸಿದರೂ ರಾಷ್ಟ್ರಪತಿಗಳ ಅನುಮೋದನೆ ಅಗತ್ಯ. ಅಂದರೆ ಕೇಂದ್ರ ಸರ್ಕಾರ ಒಪ್ಪಬೇಕು. 341(2)ರ ಪ್ರಕಾರ- ಎಸ್‌ಸಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ಅಥವಾ ಕೈಬಿಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ. ಹೀಗಾಗಿ 341 (3) ಸೇರಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು.
ಪಂಜಾಬ್, ಹರ್ಯಾಣ ಸರ್ಕಾರಗಳು ಎಸ್‌ಸಿ ಒಳಮೀಸಲಾತಿಯನ್ನು ಜಾರಿಗೆ ತಂದಿದ್ದವು. ಆದರೆ ಅದು ಇ.ವಿ.ಚಿನ್ನಯ್ಯ ಪ್ರಕರಣದಿಂದಾಗಿ ತೆರವಾಗಬೇಕಾಯಿತು. ಆಂಧ್ರದಲ್ಲಿ 1990ರಲ್ಲಿ ಒಳಮೀಸಲಾತಿ ಹೋರಾಟ ಜೋರಾದ ಬಳಿಕ ಅವಿಭಜಿತ ಆಂಧ್ರ ಸರ್ಕಾರ 1999-2000ರಲ್ಲಿ ’ಪರಿಶಿಷ್ಟ ಮೀಸಲಾತಿಯ ಪುನರ್ ವರ್ಗೀಕರಣ ಕಾಯಿದೆ’ಯನ್ನು ಜಾರಿಗೆ ತಂದು ಒಳಮೀಸಲಾತಿಯನ್ನು ನೀಡಿತು. ಆಂಧ್ರ ಹೈಕೋರ್ಟ್ ಸರ್ಕಾರದ ನಿಲುವನ್ನು ಊರ್ಜಿತಗೊಳಿಸಿತು. ಆದರೆ ಇ.ವಿ.ಚಿನ್ನಯ್ಯ ಎಂಬವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಜಸ್ಟಿಸ್ ಸಂತೋಷ್ ಹೆಗ್ಡೆ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು 2005ರಲ್ಲಿ ತೀರ್ಪು ನೀಡಿ, “ಪರಿಶಿಷ್ಟರನ್ನು ವರ್ಗೀಕರಿಸಲು ಸಾಧ್ಯವಿಲ್ಲ, ಮೀಸಲಾತಿಯ ವಿಚಾರ ಕೇಂದ್ರಕ್ಕೆ ಬಿಟ್ಟಿದ್ದು” ಎಂದಿತ್ತು.
ಯುಪಿಎ ಸರ್ಕಾರ 2007ರಲ್ಲಿ ಜಸ್ಟೀಸ್ ಉಷಾ ಮೆಹ್ರಾ ಅವರ ನೇತೃತ್ವದ ಆಯೋಗವನ್ನು ರಚಿಸಿತ್ತು. ಎಸ್‌ಸಿ ಮೀಸಲಾತಿಯ ವರ್ಗೀಕರಣದ ಅಗತ್ಯತೆಯನ್ನು ಎತ್ತಿಹಿಡಿದ ಸಮಿತಿಯು ಸಂವಿಧಾನಕ್ಕೆ ತಿದ್ದುಪಡಿ ತಂದು ಕಲಂ 341 (3) ಸೇರಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಇದರ ನಡುವೆ ಪಂಜಾಬ್, ತಮಿಳುನಾಡು ಸರ್ಕಾರಗಳು ಅತಿ ಹಿಂದುಳಿದ ಪರಿಶಿಷ್ಟರಿಗೆ ಮೊದಲ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಾಗ ದವಿಂದರ್ ಸಿಂಗ್ ಎಂಬವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರು ನೀಡಿದ ತೀರ್ಪು ಇ.ವಿ.ಚಿನ್ನಯ್ಯ ಪ್ರಕರಣಕ್ಕೆ ತದ್ವಿರುದ್ಧವಾಗಿತ್ತು. “ಎಸ್‌ಸಿ ಮೀಸಲಾತಿಯ ವರ್ಗೀಕರಣ ಮತ್ತು ಈವರೆಗೆ ಮೀಸಲಾತಿಯಿಂದ ಹೆಚ್ಚಿನ ಲಾಭ ಪಡೆಯದ ಪರಿಶಿಷ್ಟ ಜಾತಿಗಳಿಗೆ ಆದ್ಯತೆಯನ್ನು ಒದಗಿಸುವ ಅಧಿಕಾರವು ರಾಜ್ಯ ಸರ್ಕಾರಗಳಿಗಿದೆ” ಎಂದಿತ್ತು ಸುಪ್ರೀಂಕೋರ್ಟ್. ಆದರೆ ಇದು ಕೂಡ ಐವರು ನ್ಯಾಯಮೂರ್ತಿಗಳ ಪೀಠವಾದ್ದರಿಂದ 2005ರ ತೀರ್ಪುವನ್ನು ಮೀರಲು ಬರುವುದಿಲ್ಲ. ಹೆಚ್ಚುವರಿ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಬೇಕಾಗಿತ್ತು. ಎರಡೂವರೆ ವರ್ಷಗಳಿಂದ ಯಾವುದೇ ಚಲನೆ ಕಂಡು ಬರಲಿಲ್ಲ. ಅಂತಿಮವಾಗಿ ಇತ್ತೀಚೆಗೆ ಏಳು ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣವನ್ನು ನೀಡಲಾಗಿದೆ. ಜನವರಿಯಿಂದ ವಿಚಾರಣೆ ನಡೆಯಲಿದೆ. ಇದು ಒಳಮೀಸಲಾತಿಯ ಹೋರಾಟದ ಏಳುಬೀಳಿನ ಸಂಕ್ಷಿಪ್ತ ಇತಿಹಾಸ.
ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ, ಕೇಂದ್ರ ಸರ್ಕಾರದ ಪಾತ್ರವೇನು? ಎಂಬುದಾಗಿದೆ. ತಿದ್ದುಪಡಿ ಮೂಲಕ 341 (3) ಸೇರಿದ್ದರೆ ಇಷ್ಟು ಗೊಂದಲವೇ ಬೇಕಿರಲಿಲ್ಲ. ಆ ಮೂಲಕ ರಾಜ್ಯಗಳೇ ಎಸ್‌ಸಿ ಮೀಸಲಾತಿ ಪಟ್ಟಿಯನ್ನು ನಿರ್ಧರಿಸುತ್ತಿದ್ದವು. ಈಗಲೂ ಕಾಲ ಮಿಂಚಿಲ್ಲ. ಆದರೆ ಬಿಜೆಪಿಗೆ ಒಳಮೀಸಲಾತಿ ಕುರಿತು ಯಾವುದೇ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ’ನ್ಯಾಯಾಧೀಕರಣ’ (ಸಬ್‌ಜ್ಯುಡೀಸ್) ಎಂಬ ಸಬೂಬು ನೀಡಲಾಗುತ್ತದೆ. ಆದರೆ ನ್ಯಾಯಾಧೀಕರಣಗೊಂಡ ವಿಚಾರವನ್ನು ಉಲ್ಲಂಘಿಸಿದ ಉದಾಹರಣೆಗಳಿವೆ. ದೆಹಲಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಸುಪ್ರೀಂ ಕೋರ್ಟ್ ಹೇಳಿದಾಗ ಸುಗ್ರೀವಾಜ್ಞೆ ತಂದು ಕೋರ್ಟ್ ನಿಲುವನ್ನು ಕೇಂದ್ರ ಸರ್ಕಾರ ಮೀರಿತ್ತಲ್ಲವೇ?
ಎರಡನೇ ಕೆಲಸ: 9ನೇ ಶೆಡ್ಯೂಲ್‌ಗೆ ಸೇರ್ಪಡೆ
ಒಳಮೀಸಲಾತಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೇ ಇಲ್ಲ. ಸುಪ್ರೀಂಕೋರ್ಟ್‌ನ ಪರಿವೀಕ್ಷಣೆಯಿಂದ ತಪ್ಪಿಸಿಕೊಳ್ಳಲು ಇರುವ ಅವಕಾಶವೇ 9ನೇ ಶೆಡ್ಯೂಲ್. ಒಳಮೀಸಲಾತಿ ಸಂಬಂಧಿತ ಕಾಯ್ದೆಗಳನ್ನು ಇದರೊಳಗೆ ಸೇರಿಸಿದ್ದರೆ ನ್ಯಾಯಾಧೀಕರಣದಿಂದ ಪಾರಾಗಬಹುದಿತ್ತು. ಆದರೆ ಅದನ್ನೂ ಮಾಡಲಿಲ್ಲ. (ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದರೆ ಮಾತ್ರ 9ನೇ ಶೆಡ್ಯೂಲ್‌ನಲ್ಲಿ ಸೇರಿಸಿದ ಕಾಯ್ದೆಗಳನ್ನು ಸುಪ್ರೀಂಕೋರ್ಟ್ ಪರಿವೀಕ್ಷಣೆ ಮಾಡಬಹುದು ಎಂದು ಕೋರ್ಟ್ ಹೇಳಿದ್ದುಂಟು. ಒಳಮೀಸಲಾತಿಯು ಸಂವಿಧಾನದ ಆಶಯವನ್ನು ಬಲಪಡಿಸುತ್ತದೆಯೇ ಹೊರತು ಉಲ್ಲಂಘಿಸುವುದಿಲ್ಲ. ಹೀಗಾಗಿ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ತಕರಾರು ತೆಗೆಯುವುದಿಲ್ಲ ಎಂದೇ ಭಾವಿಸಬಹುದು.)
ಇದನ್ನೂ ಓದಿರಿ: ಚುನಾವಣೆಗಾಗಿ ಲಿಂಗಾಯತರು; ಅಧಿಕಾರ ಬಂದಾಗ ಬ್ರಾಹ್ಮಣರು
ಇಷ್ಟು ಮಾಡದೆ ಮೋದಿ ಸಾಹೇಬರು ಮಾದಿಗರ ವೇದಿಕೆಗೆ ಬಂದು ಮತ್ತೆ ಮಹಾವಂಚನೆಯನ್ನೇ ಎಸಗಿದ್ದಾರೆ. ಈಗಾಗಲೇ ಆಗಿರುವ ಶಿಫಾರಸ್ಸುಗಳು, ವರದಿಗಳನ್ನು ಬದಿಗೊತ್ತಿ ಮತ್ತೆ ಸಮಿತಿ ರಚಿಸಿ ಏನನ್ನು ಸಾಧಿಸಲು ಹೊರಟಿದ್ದಾರೆ? ಹೀಗಾಗಿ ಒಂಬತ್ತೂವರೆ ವರ್ಷ ಸುಮ್ಮನಿದ್ದು ಚುನಾವಣೆಯಲ್ಲಿ ವೋಟಿಗಾಗಿ ಮತ್ತೊಂದು ಗಿಮಿಕ್ ಮಾಡುತ್ತಿದ್ದಾರೆನ್ನದೆ ವಿಧಿಯಲ್ಲ. ಮಿತ್ರಪಕ್ಷಗಳ ಹಂಗೂ ಇಲ್ಲದೆ ಒಳಮೀಸಲಾತಿ ಜಾರಿಗೊಳಿಸಬಹುದಾದ ಬಹುಮತ ಬಿಜೆಪಿಗಿದ್ದರೂ ಯಾವುದೇ ಕ್ರಮ ಜರುಗಿಸದೆ ಸಮುದಾಯಗಳ ಕಣ್ಣೊರೆಸುವ ತಂತ್ರವನ್ನು ಮೋದಿ ಮಾಡುತ್ತಿರುವುದೇಕೆ? ಕರ್ನಾಟಕ ಚುನಾವಣೆಯ ಸಂದರ್ಭದಲ್ಲಿ ಮಾಡಿದ ಗಿಮಿಕ್ ಕೂಡ ಮಹಾವಂಚನೆಯಿಂದ ಕೂಡಿತ್ತು ಎಂಬುದನ್ನು ಈಗಾಗಲೇ ಸಾಕಷ್ಟು ಚರ್ಚಿಸಿದ್ದೇವೆ. ಸಮುದಾಯ ಇಂತಹ ಚುನಾವಣೆ ಜುಮ್ಲಾಗಳ ಕುರಿತು ಎಚ್ಚರ ವಹಿಸಬೇಕಾಗಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.