ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ಒಂದಾದ ಮೇಲೊಂದರಂತೆ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಈ ಹಿನ್ನೆಲೆ, ತುರ್ತು ಕ್ರಮ ಕೈಗೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿರುವ ಪಬ್, ಹೋಟೆಲ್, ರೆಸ್ಟೋರೆಂಟ್, ಬೃಹತ್ ಮಳಿಗೆಗಳಿಗೆ ಭೇಟಿ ನೀಡಿ ಅಗ್ನಿದುರಂತ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ, ನಿಯಮ ಪಾಲನೆ ಮಾಡದ ಹಲವು ಅಂಗಡಿಗಳನ್ನು ಮುಚ್ಚಿದ್ದರು. ಇದೀಗ, ನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ.
ಬೆಂಗಳೂರಿನ ಬಾಣಸವಾಡಿ ಔಟರ್ ರಿಂಗ್ ರೋಡ್ನ ನಾಲ್ಕು ಅಂತಸ್ತಿನ ಕಟ್ಟಡ ಬೆಂಕಿಗೆ ಹೊತ್ತಿ ಉರಿದಿದೆ. ನ.12 ರಂದು ತಡರಾತ್ರಿ 12 ಗಂಟೆಗೆ ಈ ಅಗ್ನಿ ಅವಘಡ ದುರಂತ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಬೆಂಕಿ ಹೊತ್ತಿದ ವಿಚಾರ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ನಿರತರಾದರೂ ಈ ವೇಳೆ, ಕಟ್ಟಡದೊಳಗೆ ಸಿಲುಕಿದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಈ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿ ಸ್ಟ್ಯಾನ್ಲಿ ಫರ್ನಿಚರ್ಸ್, ಎರಡನೇ ಮಹಡಿಯಲ್ಲಿ ಕಾಮೆಡ್ ಕೋಂಚಿಂಗ್ ಸೆಂಟರ್, 3 ನೇ ಮಹಡಿಯಲ್ಲಿ ಬ್ರೇಕ್ಸ್ ಕಂಟ್ರೋಲ್ಸ್ ಹಾಗೂ 4ನೇ ಮಹಡಿಯಲ್ಲಿ ಸಾಫ್ಟ್ವೇರ್ ಕಂಪನಿ ಇತ್ತು. ಬೆಂಕಿಯ ಕೆನ್ನಾಲಿಗೆಗೆ ಇಡೀ ಕಟ್ಟಡ ಸುಟ್ಟು ಭಸ್ಮವಾಗಿದೆ. ಈ ಅಗ್ನಿ ಅವಘಡದ ದುರಂತದಲ್ಲಿ ಫರ್ನಿಚರ್ ಶಾಪ್, ಕೋಚಿಂಗ್ ಸೆಂಟರ್, ಐಟಿ ಕಂಪನಿಯ ದಾಖಲೆಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
#WATCH | Karnataka: A massive fire broke out in a four-storey building in Banasawadi of Ramamurthy Nagar, Bengaluru, early in the morning. Four fire tenders reached the spot and doused the fire.
(Source: Fire Department) pic.twitter.com/9KfqIFp6jV
— ANI (@ANI) November 13, 2023
ಈ ಕಟ್ಟಡ ಶಂಕರ್ ಎಂಬುವವರಿಗೆ ಸೇರಿದ್ದು, ಕಳೆದ ಐದು ವರ್ಷಗಳಿಂದ ಕಟ್ಟಡವನ್ನು ಬಾಡಿಗೆಗೆ ನೀಡಿದ್ದರು.
ಈ ಘಟನೆ ಸಂಬಂಧ ಮಾತನಾಡಿದ ಕಟ್ಟಡ ಮಾಲೀಕ ಶಂಕರ್, “ನಾಲ್ಕು ಮಹಡಿ ಬಾಡಿಗೆಗೆ ನೀಡಲಾಗಿತ್ತು. ನೆಲ ಮಹಡಿ ಮತ್ತು ಮೊದಲನೇ ಮಹಡಿ ಫರ್ನಿಚರ್ ಶೋರೂಂ ಇತ್ತು. ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಇತ್ತು. ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಸಾಫ್ಟ್ವೇರ್ ಕಂಪನಿ ಇತ್ತು. ರಾತ್ರಿ ಸುದ್ದಿ ತಿಳಿದು ಬಂದು ನೋಡುವಷ್ಟರಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಪಟಾಕಿ ಕಿಡಿ ಹತ್ತಿರಬೇಕು ಅಂತಾ ಅನಿಸುತ್ತಿದೆ. ಪೊಲೀಸರಿಗೆ ಈ ಬಗ್ಗೆ ದೂರು ನೀಡಬೇಕು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಜ್ಯಾದ್ಯಂತ ಭಾರೀ ಮಳೆ; ಹವಾಮಾನ ಇಲಾಖೆ ಸೂಚನೆ
ಅಗ್ನಿ ಅವಘಡ
ನಗರದಲ್ಲಿ ನಡೆದ ಸಾಲು ಸಾಲು ಅಗ್ನಿ ದುರಂತಗಳಲ್ಲಿ ಅತ್ತಿಬೆಲೆ ಪಟಾಕಿ ಅಗ್ನಿ ಅವಘಡದಲ್ಲಿ 17 ಜನ ಸಾವನ್ನಪ್ಪಿದ್ದರೆ, ರಾಸಾಯನಿಕ ಸೋರಿಕೆಯಿಂದ ನಗರದ ಚೋಳರಪಾಳ್ಯದಲ್ಲಿರುವ ಅಗರಬತ್ತಿ ಗೋದಾಮಿಗೆ ಬೆಂಕಿ ಹೊತ್ತಿ, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಜತೆಗೆ 5ಕ್ಕೂ ಹೆಚ್ಚು ಬೈಕ್ಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಇನ್ನು ಲಗ್ಗೆರೆಯಲ್ಲಿ ಗುಜರಿ ಅಂಗಡಿಗೆ ಬೆಂಕಿ ಹೊತ್ತಿ ಅಪಾರ ಹಾನಿ ಉಂಟುಮಾಡಿದೆ. ಅ.18ರಂದು ಕೋರಮಂಗಲದಲ್ಲಿರುವ ಪಬ್ವೊಂದಕ್ಕೆ ಬೆಂಕಿ ಹೊತ್ತಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ವೇಳೆ, ಪ್ರಾಣ ಉಳಿಸಿಕೊಳ್ಳಲು ಪ್ರೇಮ್ ಸಿಂಗ್ ಎಂಬುವರು ಆರನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಬಲಗೈ ಮೂಳೆ ಮುರಿದಿತ್ತು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ಉದ್ದಿಮೆಗಳಿಗೆ ಪರವಾನಿಗೆ ನೀಡಲಾಗಿದೆ. ಈ ಪೈಕಿ 748 ಉದ್ದಿಮೆಗಳನ್ನು ಪರಿಶೀಲಿಸಿ, 353 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ, 48 ಉದ್ದಿಮೆಗಳನ್ನು ಮುಚ್ಚಿದ್ದರು.