ಬೆಳಕಿನ ಹಬ್ಬದ ದಿನ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವುದು ಸರ್ವೇ ಸಾಮಾನ್ಯ. ಪರಿಸರ ಹಾನಿಕಾರಕ ಪಟಾಕಿ ಬಳಸಬೇಡಿ. ಹಸಿರು ಪಟಾಕಿ ಮಾತ್ರ ಬಳಸಿ. ಜತೆಗೆ ಪಟಾಕಿ ಹಚ್ಚುವ ಮುನ್ನ ಮುಂಜಾಗೃತ ಕ್ರಮ ವಹಿಸಿ ಎಂದು ನಾಗರಿಕ ಸಂಸ್ಥೆಗಳು, ವೈದ್ಯರು ಸೂಚಿಸಿದ್ದವು. ಆದರೂ, ಕೂಡ ದೀಪಾವಳಿ ಹಬ್ಬದ ಮೊದಲನೇಯ ದಿನವಾದ ರವಿವಾರದಂದು ಪಟಾಕಿ ಸಿಡಿದು ಮಕ್ಕಳು ಸೇರಿದಂತೆ 26 ಜನರು ಗಾಯಗೊಂಡಿದ್ದಾರೆ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 22 ಜನರು, ಮಿಂಟೋ ಆಸ್ಪತ್ರೆಯಲ್ಲಿ ನಾಲ್ವರು ಚಿಕ್ಸಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ 22 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 10 ಜನರಿಗೆ ಗಂಭೀರ ಗಾಯಗಳಾಗಿದ್ದು, 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಾರಾಯಣ ನೇತ್ರಾಲಯ ಮುಖ್ಯಸ್ಥ ರೋಹಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ನಾಲ್ವರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆ, ಎಲ್ಲೆಡೆ ಸಂಭ್ರಮದಿಂದ ಪಟಾಕಿ ಹಚ್ಚುತ್ತಾರೆ. ಈ ವೇಳೆ, ಕಣ್ಣಿಗೆ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ನಗರದ ಮಿಂಟೋ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳು ಸಜ್ಜಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದಾರೆ.
ಪಟಾಕಿ ಅಂಟಿಸುವ ಸಂದರ್ಭದಲ್ಲಿ ಉಂಟಾಗುವ ಅವಘಡಗಳಿಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಮಿಂಟೋ ಕಣ್ಣಿನ ಆಸ್ಪತ್ರೆ ಸಿದ್ಧವಾಗಿದೆ. ಚಿಕಿತ್ಸೆಗೆ ಬೇಕಾದ ಔಷಧಿ, ಐ ಡ್ರಾಪ್ಸ್ ಸೇರಿದಂತೆ ಎಲ್ಲವನ್ನು ವಾರ್ಡ್‌ಗಳಲ್ಲಿ ಶೇಖರಣೆ ಮಾಡಿಟ್ಟಿದೆ. ಜತೆಗೆ, ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆಗೆ ಬರುವ ಮಕ್ಕಳಿಗಾಗಿ ಆಸ್ಪತ್ರೆ 15 ಬೆಡ್‌ಗಳಿರುವ ಪ್ರತ್ಯೇಕ ವಾರ್ಡ್ ಆರಂಭಿಸಿದೆ. ಯುವಕರಿಗೆ 10 ಬೆಡ್, ಮಹಿಳೆಯರಿಗೆ 10 ಬೆಡ್ ಸೇರಿದಂತೆ ಒಟ್ಟು 35 ಬೆಡ್‌ಗಳನ್ನ ಮೀಸಲಿರಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಧ್ಯರಾತ್ರಿ ಹೊತ್ತಿ ಉರಿದ ನಾಲ್ಕು ಅಂತಸ್ತಿನ ಕಟ್ಟಡ
ತುರ್ತು ಸಹಾಯವಾಣಿ – 9481740137, 08026707176 ಶುರು ಮಾಡಿದೆ. ಯಾವುದೇ ತುರ್ತು ಸರ್ಜರಿ ಹಾಗೂ ಗಾಯಗೊಂಡ ರೋಗಿಗೆ ಚಿಕಿತ್ಸೆ ನೀಡಲು ಅದೇ ಬ್ಲಾಕ್ ನಲ್ಲಿಯೇ ಆಪರೇಷನ್ ಬ್ಲಾಕ್ ಕೂಡಾ ಇದ್ದು, ಶಸ್ತ್ರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಣ್ಣಿನ ಗಾಯಗಳ ಜತೆಗೆ ಮುಖ ಸೇರಿದಂತೆ ದೇಹದ ಇತರೆ ಭಾಗದಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಮೀಸಲಿಡಲು ಕೇಳಿಕೊಳ್ಳಲಾಗಿದೆ.
ಪಟಾಕಿ ಅಂಟಿಸುವ ಸಮಯದಲ್ಲಿ ಕಣ್ಣಿಗೆ ಮಾತ್ರ ಗಾಯವಲ್ಲದೇ, ಪಟಾಕಿಗಳಿಂದ ಸುಟ್ಟು ಗಾಯಗಳಾಗಿದ್ದರೆ, ತುರ್ತು ಚಿಕಿತ್ಸೆ ನೀಡುವ ಸಲುವಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ ವಾರ್ಡ್ ತೆರೆಯಲಾಗುತ್ತದೆ.
ಪಟಾಕಿಯಿಂದ ಗಾಯಗೊಂಡಾಗ ಏನ್ ಮಾಡಬಾರದು?
- ಪಟಾಕಿಯಿಂದ ಕಣ್ಣಿಗೆ ಗಾಯವಾದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ.
- ಪಟಾಕಿಯ ದೊಡ್ಡ ಕಣವೇನಾದರೂ ಒಳಗೆ ಸಿಕ್ಕಿಹಾಕಿಕೊಂಡಿದ್ದರೆ ಬಲವಂತವಾಗಿ ಎಳೆದು ತೆಗೆಯಲು ಪ್ರಯತ್ನಿಸಬೇಡಿ.
- ಕಣ್ಣುಗಳನ್ನು ಮುಚ್ಚಿಸಿ ಕೂಡಲೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ.
- ಗಾಯದ ಜಾಗವನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ಅದ್ದಿಸಿ. ಆದರೆ, ಐಸ್ ನೀರು ಬಳಸಬೇಡಿ.
- ಗಾಯ ಸ್ಥಳ ಒಣಗಲು ಬಿಡಿ. ಶುದ್ಧವಾದ ಬಟ್ಟೆಯಿಂದ ಗಾಯವನ್ನು ಮುಚ್ಚಬೇಕು.
ಪಟಾಕಿ ಹಚ್ಚುವ ಮುನ್ನ ಮುನ್ನೆಚ್ಚರಿಕೆ ವಹಿಸಿ
- ಪಟಾಕಿ ಸಿಡಿಸುವಾಗ ಉದ್ದನೆಯ ಕಡ್ಡಿ ಬಳಸಿ. ಜತೆಗೆ, ಪಟಾಕಿ ಬಾಕ್ಸ್ ಮೇಲೆ ಇರುವ ಎಚ್ಚರಿಕೆಗಳನ್ನು ಓದಿಕೊಳ್ಳಿ.
- ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಮಾರ್ಗದರ್ಶನ ಮಾಡಬೇಕು.
- ಪಟಾಕಿ ಹಚ್ಚುವ ವೇಳೆ, ಪಕ್ಕದಲ್ಲಿ ಒಂದು ಬಕೆಟ್ ನೀರು ಇಟ್ಟುಕ್ಕೊಳ್ಳಿ.
- ಪಟಾಕಿ ಹಚ್ಚುವ ಸಮಯದಲ್ಲಿ ಕಾಟನ್ ಬಟ್ಟೆ ಬಳಸಿ. ಸಿಂಥೆಟಿಕ್ ಅಥವಾ ಬೇಗನೆ ಸುಡುವ ಸಡಿಲ ಬಟ್ಟೆ ಧರಿಸಬೇಡಿ.
- ಅರೆಬರೆ ಸುಟ್ಟ ಪಟಾಕಿಯನ್ನು ಕೈಯಲ್ಲಾಗಲಿ, ಕಾಲಲ್ಲಾಗಲಿ ನಂದಿಸುವ ಪ್ರಯತ್ನ ಮಾಡಬಾರದು.
- ಜನದಟ್ಟಣೆಯ ಪ್ರದೇಶ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು ಹಾಗೂ ಪೆಟ್ರೋಲ್ ಬಂಕ್ ಬಳಿ ಪಟಾಕಿ ಸುಡಬಾರದು.
- ಪೋಷಕರು ಮತ್ತು ಮಕ್ಕಳು ಎಚ್ಚರಿಕೆಯಿಂದ ಪಟಾಕಿ ಸಿಡಿಸಿ
- ಕಣ್ಣಿನ ಸಮಸ್ಯೆ ಇರುವವರು ಪಟಾಕಿಯಿಂದ ದೂರ ಇರಿ, ಸುರಕ್ಷಿತವಾಗಿರಿ.