ಬ್ರಹ್ಮಾಖಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿದು ಬಿದ್ದಿದ್ದು, ಸುಮಾರು 40 ಕಾರ್ಮಿಕರು ಅವಶೇಷಗಳಲ್ಲಿ ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಭಾನುವಾರ ರಾತ್ರಿಯಿಡೀ ಶ್ರಮಿಸಿದ ರಕ್ಷಣಾಧಿಕಾರಿಗಳು ಕಾರ್ಮಿಕರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಿದ್ದಾರೆ.
ಕಾರ್ಮಿಕರೊಂದಿಗೆ ವಾಕಿ-ಟಾಕಿಗಳಲ್ಲಿ ಸಂವಹನವನ್ನು ಸ್ಥಾಪಿಸಲಾಗಿದೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಆಹಾರ ಕೇಳಿದ್ದಾರೆ. ಅವರಿಗೆ ಕಂಪ್ರೆಸರ್‌ಗಳ ಸಹಾಯದಿಂದ ಆಹಾರ ಪ್ಯಾಕೆಟ್‌ಗಳನ್ನು ಸರಬರಾಜು ಮಾಡಲಾಗಿದೆ ಎಂದು ಸಿಲ್ಕ್ಯಾರಾ ಪೊಲೀಸ್ ನಿಯಂತ್ರಣ ಕೊಠಡಿ ತಿಳಿಸಿದೆ.
ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ನಡುವೆ ಸುರಂಗದ ಒಳಗಿನ ಅವಶೇಷಗಳ ಮೂಲಕ ಸಿಕ್ಕಿಬಿದ್ದ ಕಾರ್ಮಿಕರು ಹೊರಬರಲು ಮಾರ್ಗವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಿಲ್ಕ್ಯಾರಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಭಾನುವಾರ ಬೆಳಗ್ಗೆ ಸುರಂಗದ ಒಂದು ಭಾಗ ಕುಸಿದಿದ್ದು, ಸುಮಾರು 40 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ. ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಕಾರ್ಮಿಕರು ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಿಂದ ಬಂದವರಾಗಿದ್ದಾರೆ.
ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ಮುಂತಾದ ಏಜೆನ್ಸಿಗಳ ಸುಮಾರು 160 ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.
ನೀರಿನ ಪೈಪ್‌ಲೈನ್ ಮೂಲಕ ಸಾಕಷ್ಟು ಆಮ್ಲಜನಕ ಲಭ್ಯವಾಗಿದ್ದು, ಕಾರ್ಮಿಕರು ಸುರಕ್ಷಿತರಾಗಿರಲು ನೆರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.