ಈ ದಿನ ಸಂಪಾದಕೀಯ | ಉರಿದು ಉಳಿದ ಮಣ್ಣಿನ ಹಣತೆಯಲ್ಲಿ ಎಣ್ಣೆ ಹೆಕ್ಕುವ ಬಡವರು ಮತ್ತು ವಿಶ್ವಗುರು

Date:

Advertisements

ಬಡವ ರ ಬರ್ಬರ ಬದುಕು ಕಣ್ಮುಂದೆ ಕಾಣುತ್ತಿದ್ದರೂ, ಅಂಕಿ-ಅಂಶಗಳು ಸತ್ಯವನ್ನು ಹೊರಹಾಕುತ್ತಿದ್ದರೂ, ಅವರ ಬದುಕಿಗೆ ಬೆಳಕು ತರಲು ಯತ್ನಿಸದ ಬಿಜೆಪಿ ಮತ್ತು ಸಂಘಿಗಳು ಭಾರತ ವಿಶ್ವಗುರುವಿನತ್ತ ಹೆಜ್ಜೆ ಹಾಕುತ್ತಿದೆ ಎಂದು ಸುಳ್ಳು ಬೊಗಳುತ್ತಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ತ್ರೇತಾಯುಗದ ರಾಮನಿಗೆ ಗುಡಿ ಕಟ್ಟುತ್ತಿದ್ದಾರೆ. ಅಡುಗೆಗೆ ಎಣ್ಣೆ ಇಲ್ಲದೆ ಅಂಗಲಾಚುತ್ತಿರುವವರ ಮುಂದೆ ಮಣ್ಣಿನ ಹಣತೆಗಳ ಹಚ್ಚಿಟ್ಟು ಬಡವರ ಬದುಕನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಇದು ಮೋದಿ ಭಾರತ. ವಿಶ್ವಗುರುವಿನತ್ತ ದಾಪುಗಾಲು ಹಾಕುತ್ತಿರುವ ಭಾರತ.

ರಾವಣನ ಮೇಲೆ ವಿಜಯ ಸಾಧಿಸಿ ಹದಿನಾಲ್ಕು ವರ್ಷಗಳ ವನವಾಸದ ನಂತರ ಶ್ರೀರಾಮ ಮರಳಿ ಅಯೋಧ್ಯೆಗೆ ಬಂದುದನ್ನು ಸಂಭ್ರಮಿಸಲು ಜನ, ಹಾದಿಯುದ್ದಕ್ಕೂ ದೀಪಗಳನ್ನು ಹಚ್ಚಿಟ್ಟು ಆಚರಿಸುವ ಹಬ್ಬವೇ ದೀಪಾವಳಿ ಎಂಬ ಪ್ರತೀತಿ ಇದೆ. ಇದು ಬೆಳಕಿನ ಹಬ್ಬ. ಕತ್ತಲೆ ಹೊಡೆದೋಡಿಸಿ ಬೆಳಕು ತರುವ, ಕೆಟ್ಟದರ ಮೇಲೆ ಒಳ್ಳೆಯದು ಗೆಲ್ಲುವ, ಸುಳ್ಳಿನ ಮೇಲೆ ಸತ್ಯಕ್ಕೆ ಜಯ ಸಿಗುವ ಹಬ್ಬ ಎಂಬ ನಂಬಿಕೆಯೂ ಇದೆ.

ತ್ರೇತಾಯುಗದಲ್ಲಿ ಇದ್ದನೆಂದು ಹೇಳಲಾಗುವ ಶ್ರೀರಾಮನಿಗೆ, ಈಗ ಮೋದಿ-ಯೋಗಿಯುಗದಲ್ಲಿ ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ಅಯೋಧ್ಯೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಇಂತಹ ರಾಮನಗರಿ ಅಯೋಧ್ಯೆ ಮೊನ್ನೆ ದೀಪನಗರಿಯಾಗಿ ಮಾರ್ಪಾಡಾಗಿತ್ತು. ಮತ್ತೊಂದಿಷ್ಟು ಕೋಟಿ ಸುರಿದು 51 ಘಾಟ್‌ಗಳಲ್ಲಿ 22.23 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ, ಬಡವರ ಬದುಕಿಗೆ ಬೆಳಕು ತರುವಲ್ಲಿ ಸಂಪೂರ್ಣವಾಗಿ ಸೋತು, ಅದನ್ನು ಮುಚ್ಚಿಕೊಳ್ಳಲು ಮತ್ತೆ ಶ್ರೀರಾಮನ ಮೊರೆ ಹೋಗಿತ್ತು.

Advertisements

ಲಕ್ಷಗಟ್ಟಲೆ ದೀಪ ಹಚ್ಚಿದ್ದನ್ನು ಗಿನ್ನಿಸ್‌ ದಾಖಲೆಗೆ ಜಮೆ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ‘ದೀಪೋತ್ಸವದ ಕಾರ್ಯಕ್ರಮವನ್ನು ಆರಂಭಿಸಿದಾಗ, ಪ್ರತಿಯೊಬ್ಬರಿಗೂ ಒಂದೇ ಒಂದು ಆಸೆಯಿತ್ತು. ಅದು ರಾಮ ಮಂದಿರ ನಿರ್ಮಾಣ. ರಾಮ ಮಂದಿರ ನಿರ್ಮಾಣ ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಭಾರತದಲ್ಲಿ ಸ್ಥಾಪಿಸಿದ ‘ರಾಮ ರಾಜ್ಯ’ದ ಅಡಿಪಾಯವನ್ನು ಬಲಪಡಿಸುತ್ತದೆ. 2024ರ ಜ.22ರಂದು ರಾಮ ಮಂದಿರದ ಉದ್ಘಾಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ. ರಾಮಮಂದಿರ ನಿರ್ಮಾಣವಾಗುತ್ತಿದ್ದಂತೆ ಅಯೋಧ್ಯೆಯ ಮುಖವನ್ನು ಬದಲಾಯಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆʼ ಎಂದು ಹೇಳಿದ್ದಾರೆ.

ವಿಪರ್ಯಾಸಕರ ಸಂಗತಿ ಎಂದರೆ, ಬಿಜೆಪಿ ಮತ್ತದರ ಸಂಘಪರಿವಾರ ಶ್ರೀರಾಮನಿಗಾಗಿ ಮಂದಿರ ನಿರ್ಮಿಸುವ ನಿಟ್ಟಿನಲ್ಲಿ ಮುಸಲ್ಮಾನರ ಬಾಬ್ರಿ ಮಸೀದಿ ಕೆಡವಿದೆ, ದೇಶದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ಸಹಬಾಳ್ವೆಗೆ ಕೊಳ್ಳಿ ಇಟ್ಟಿದೆ, ವಿಷಬೀಜ ಬಿತ್ತಿ ಕೋಮುಗಲಭೆಗೆ, ರಕ್ತಪಾತಕ್ಕೆ, ಸಾವಿರಾರು ಜನರ ಮಾರಣಹೋಮಕ್ಕೆ ಕಾರಣವಾಗಿದೆ. ಅದೇ ಶ್ರೀರಾಮನನ್ನು ಮುಂದಿಟ್ಟು ಚುನಾವಣೆಗಳನ್ನು ಗೆಲ್ಲುತ್ತಿದೆ, ಅಧಿಕಾರ ಹಿಡಿಯುತ್ತಿದೆ. 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಶತಾಯ ಗತಾಯ ಗೆದ್ದು ಮೂರನೆ ಬಾರಿಗೆ ಗದ್ದುಗೆ ಹಿಡಿಯಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತವರ ಸಂಘಪರಿವಾರ, ರಾಮಮಂದಿರ ನಿರ್ಮಾಣವನ್ನೇ ಭಾವನಾತ್ಮಕ ಅಸ್ತ್ರವನ್ನಾಗಿ ಬಳಸುವ ಹವಣಿಕೆಯಲ್ಲಿದೆ. ಅದರ ನೆಪದಲ್ಲಿ, ಅಯೋಧ್ಯೆಯಲ್ಲಿ ದೀಪೋತ್ಸವ, ಸಂಭ್ರಮ, ಮೆರವಣಿಗೆ ನಡೆಯುತ್ತಿದೆ.

ಅಯೋಧ್ಯೆಯ ಸರಯೂ ನದಿಯ ಅಸುಪಾಸಿಯಲ್ಲಿರುವ 51 ಘಾಟ್‌ಗಳಲ್ಲಿ 22.23 ಲಕ್ಷ ಮಣ್ಣಿನ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದ ಬಿಜೆಪಿ ಮತ್ತದರ ಸಂಘ ಪರಿವಾರ, ಅದೇ ಘಾಟ್‌ಗಳಲ್ಲಿ ವಾಸಿಸುತ್ತಿರುವ ಬಡವರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಅವರು ಹೇಗೆ ಬದುಕುತ್ತಿದ್ದಾರೆ ಎಂಬುದನ್ನೂ ಯೋಚಿಸುತ್ತಿಲ್ಲ. ಅದಕ್ಕೆ ಮೊನ್ನೆ ಶನಿವಾರ ನಡೆದ ಭವ್ಯ ದೀಪೋತ್ಸವವೇ ಜ್ವಲಂತ ಸಾಕ್ಷಿಯಾಗಿದೆ. ಭಾನುವಾರ ಬೆಳಗ್ಗೆ ಅದೇ ಘಾಟ್‌ನ ಬಡವರು ಬಂದು ಮಣ್ಣಿನ ಹಣತೆಯಲ್ಲಿ ಮಿಕ್ಕಿದ್ದ ಎಣ್ಣೆಯನ್ನು ಸಂಗ್ರಹಿಸುತ್ತಿದ್ದರು. ಅದರಲ್ಲಿ ಪುಟ್ಟ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆ ಎಣ್ಣೆ ಅವರ ಒಡಲು ತುಂಬುವ ಅಡುಗೆಗೆ ಬೇಕಾಗಿತ್ತು. ಎಣ್ಣೆಯನ್ನೂ ಖರೀದಿಸಲಾಗದ ಅವರ ಸ್ಥಿತಿಯನ್ನು ಇಡೀ ಭಾರತಕ್ಕೆ ತೋರುತ್ತಿತ್ತು. ಆದರೆ ಯೋಗಿಯ ಕೇಡನ್ನು, ಕೊಳಕನ್ನು ಮುಚ್ಚಲು ಪೊಲೀಸರು ಆ ಮಕ್ಕಳಿಗೆ ಲಾಠಿಯಿಂದ ಬಡಿದು ಓಡಿಸುತ್ತಿದ್ದರು.

 

ಬಡವರನ್ನು ಬಡಿಯುತ್ತಿದ್ದ ವಿಡಿಯೋವನ್ನು ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ʻದೈವಿಕತೆಯ ನಡುವೆ ಬಡತನ… ಬಡತನವು ದೀಪದಲ್ಲಿ ಎಣ್ಣೆಯನ್ನು ತೆಗೆದುಕೊಳ್ಳುವಂತೆ ಮಾಡಿದೆ, ಆಚರಣೆಯ ಬೆಳಕು ಮಸುಕಾಗುತ್ತದೆʼ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಭಾರತ ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತಿದೆ. ಆರುನೂರು ಕೋಟಿ ಖರ್ಚು ಮಾಡಿ ಚಂದ್ರನಲ್ಲಿ ಕಾಲೂರಿದೆ. ಮಿಲಿಯನ್‌ ಡಾಲರ್‌ ಕುಬೇರರ ಪಟ್ಟಿಯಲ್ಲಿ ಭಾರತೀಯ ಸಿರಿವಂತರು ಸತತವಾಗಿ ಟಾಪ್‌ ಟೆನ್ ಸ್ಥಾನ ಪಡೆಯುತ್ತಿದ್ದಾರೆ. 2000ನೇ ಇಸವಿಯಲ್ಲಿ ಕೇವಲ 9 ಜನರಿದ್ದ ಶ್ರೀಮಂತರು, ಪ್ರಧಾನಿ ಮೋದಿಯವರ ಕೃಪೆಯಿಂದಾಗಿ ಅವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹಾಗೆಯೇ ಬಡವರ ಸಂಖ್ಯೆಯೂ ಹೆಚ್ಚಾಗಿದೆ. ದೀಪಾವಳಿ ಹಬ್ಬದ ಸಡಗರದಲ್ಲಿ ಸಿರಿವಂತರ ಮನೆಯ ಮಕ್ಕಳು ಸಿಡಿಸುವ ಪಟಾಕಿಗಳಲ್ಲಿ ಅಳಿದುಳಿದ ಪಟಾಕಿಗಳನ್ನು ಹೆಕ್ಕುವ, ಯೋಗಿಯ ಹಣತೆಯಲ್ಲಿ ಉರಿದು ಉಳಿದ ಎಣ್ಣೆಯನ್ನು ಸಂಗ್ರಹಿಸುವ ಬಡತನದ ಚಿತ್ರಗಳು, ಮಾನವಂತರ ಚಿತ್ತ ಕೆಡಿಸುತ್ತಿವೆ.

ನಗೆಪಾಟಲಿನ ಸಂಗತಿ ಎಂದರೆ, ಬಡತನವನ್ನು ಹೋಗಲಾಡಿಸಲು ಸರಕಾರಗಳು ಸಹಸ್ರಾರು ಕೋಟಿಗಳ ನೂರಾರು ಯೋಜನೆಗಳನ್ನು ರೂಪಿಸುತ್ತಲೇ ಇವೆ. ಆದಾಗ್ಯೂ, ಬಡತನವನ್ನು ಈ ದೇಶದಿಂದ ಸಂಪೂರ್ಣವಾಗಿ ಹೊರದಬ್ಬಲು ಸಾಧ್ಯವಾಗಿಲ್ಲ. ಕೇಂದ್ರ ಸರಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಭಾರತದಲ್ಲಿ ಶೇ.26.97 ಮಂದಿ ಬಡತನ ರೇಖೆಗಿಂತ ಕೆಳಗಿಳಿದಿದ್ದಾರೆ ಎಂದು ಮಾಹಿತಿ ನೀಡಿ, ಸತ್ಯವನ್ನು ಒಪ್ಪಿಕೊಂಡಿದೆ.

ಬಡವರ ಬರ್ಬರ ಬದುಕು ಕಣ್ಮುಂದೆ ಕಾಣುತ್ತಿದ್ದರೂ, ಅಂಕಿ-ಅಂಶಗಳು ಸತ್ಯವನ್ನು ಹೊರಹಾಕುತ್ತಿದ್ದರೂ, ಅವರ ಬದುಕಿಗೆ ಬೆಳಕು ತರಲು ಯತ್ನಿಸದ ಬಿಜೆಪಿ ಮತ್ತು ಸಂಘಿಗಳು ಭಾರತ ವಿಶ್ವಗುರುವಿನತ್ತ ಹೆಜ್ಜೆ ಹಾಕುತ್ತಿದೆ ಎಂದು ಸುಳ್ಳು ಬೊಗಳುತ್ತಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ತ್ರೇತಾಯುಗದ ರಾಮನಿಗೆ ಗುಡಿ ಕಟ್ಟುತ್ತಿದ್ದಾರೆ. ಅಡುಗೆಗೆ ಎಣ್ಣೆ ಇಲ್ಲದೆ ಅಂಗಲಾಚುತ್ತಿರುವವರ ಮುಂದೆ ಮಣ್ಣಿನ ಹಣತೆಗಳ ಹಚ್ಚಿಟ್ಟು ಬಡವರ ಬದುಕನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಇದು ಮೋದಿ ಭಾರತ. ವಿಶ್ವಗುರುವಿನತ್ತ ದಾಪುಗಾಲು ಹಾಕುತ್ತಿರುವ ಭಾರತ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X