ದೀಪಾವಳಿ ಹಬ್ಬದ ಒಂದು ದಿನದ ನಂತರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಮತ್ತು ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಅಪಾಯವನ್ನುಂಟುಮಾಡುವ ಮಾಲಿನ್ಯಕಾರಕ ಕಣಗಳು ಕಳೆದ 24 ಗಂಟೆಗಳಲ್ಲಿ ಶೇ 140 ರಷ್ಟು ಏರಿಕೆ ಕಂಡಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ವರದಿ ತಿಳಿಸಿದೆ.
ಪಿಎಂ 2.5 ಕಣವು ಗಾಳಿಯಲ್ಲಿರುವ ಎಲ್ಲ ಕಣಗಳಲ್ಲಿ ಅತ್ಯಂತ ಹಾನಿಕಾರಕವಾಗಿದ್ದು ಬೆಳಗ್ಗೆ 7 ಗಂಟೆಗೆ ಗಂಟೆಗೆ ಸರಾಸರಿ 200.8 ರಷ್ಟಿತ್ತು. ನ.12 ರಂದು ಬೆಳಗ್ಗೆ 83.5 ರಷ್ಟು ದಾಖಲಾಗಿತ್ತು.
ಐಟಿಒ, ದೆಹಲಿ ವಿಮಾನ ನಿಲ್ದಾಣ ಪ್ರದೇಶ ಸೇರಿದಂತೆ ಹೆಚ್ಚಿನ ಸ್ಥಳಗಳಲ್ಲಿ ಪಿಎಂ 2.5 ಮತ್ತು ಪಿಎಂ 10 ಮಾಲಿನ್ಯಕಾರಕ ಕಣಗಳು 500 ರಷ್ಟು ತಲುಪಿದೆ. ಲಜಪತ್ ನಗರ್ ಮತ್ತು ಜವಾಹರಲಾಲ್ ನೆಹರು ಸ್ಟೇಡಿಯಂ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಎಕ್ಯೂಐ 900 ಕ್ಕಿಂತ ಹೆಚ್ಚು ವರದಿಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳಲ್ಲಿ ತೋರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಹೈದರಾಬಾದ್‌ನ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: 7 ಸಾವು
ಗಾಳಿಯ ಗುಣಮಟ್ಟ ಸೂಚ್ಯಂಕವನ್ನು (ಎಕ್ಯೂಐ) ಗಾಳಿಯಲ್ಲಿರುವ ಆರು ಕಣಗಳು ಮತ್ತು ಅನಿಲ ರೂಪದ ಕಣಗಳಿಂದ ಪಡೆಯಲಾಗಿದೆ. ಇವುಗಳಲ್ಲಿ ಪಿಎಂ 2.5 ಮುಖ್ಯ ಅಂಶವಾಗಿದ್ದು ಅದು ಮೂಗು ಮತ್ತು ಗಂಟಲಿನ ತಡೆಗೋಡೆಯನ್ನು ದಾಟಿ ಶ್ವಾಸಕೋಶಕ್ಕೆ ಸೇರಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪಿಎಂ 2.5 ಮತ್ತು ಸಣ್ಣ ಕಣಗಳು ಶ್ವಾಸಕೋಶಗಳು ಮತ್ತು ದೇಹದ ಉಳಿದ ಭಾಗಗಳನ್ನು ಹಾನಿಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ.
ಸಾಮಾನ್ಯವಾಗಿ ಎಕ್ಯೂಐ ಅನ್ನು ಶೂನ್ಯದಿಂದ 50 ರ ನಡುವೆ ‘ಉತ್ತಮ’, 51 ರಿಂದ 100 ‘ತೃಪ್ತಿದಾಯಕ’, 101 ರಿಂದ 200 ‘ಮಧ್ಯಮ’, 201 ರಿಂದ 300 ‘ಕಳಪೆ’, 301 ರಿಂದ 400 ‘ಅತ್ಯಂತ ಕಳಪೆ’, 401 ರಿಂದ 450 ‘ತೀವ್ರ’ ಮತ್ತು 450 ಕ್ಕಿಂತ ಹೆಚ್ಚಿನದನ್ನು ಗಂಭಿರ ಪರಿಣಾಮ ಎಂದು ಪರಿಗಣಿಸಲಾಗುತ್ತದೆ.
ವಿಶ್ವದ ಅತ್ಯಂತ ಕೆಟ್ಟ ಮಾಲಿನ್ಯ ನಗರಗಳಲ್ಲಿ ದೆಹಲಿ ಸೇರಿದಂತೆ ಭಾರತದ ಮೂರು ನಗರಗಳು ಮೊದಲು ಹತ್ತು ಸ್ಥಾನ ಪಡೆದಿವೆ. ಮೊದಲ ಸ್ಥಾನದಲ್ಲಿ ದೆಹಲಿ, ಕೋಲ್ಕತ್ತಾ ನಾಲ್ಕನೇ ಸ್ಥಾನ ಹಾಗೂ ಮುಂಬೈ ಎಂಟನೇ ಸ್ಥಾನದಲ್ಲಿದೆ.
ಸುಪ್ರೀಂ ಕೋರ್ಟ್ ಪ್ರತಿ ವರ್ಷವೂ ಭಾರತದಲ್ಲಿ ಪಟಾಕಿಗಳ ಮೇಲೆ ನಿಷೇಧವನ್ನು ಹೇರುತ್ತದೆ. ಆದರೆ ಅಪರೂಪವಾಗಿ ಮಾತ್ರ ರಾಜ್ಯ ಸರ್ಕಾರಗಳು ನಿಷೇಧವನ್ನು ಜಾರಿಗೊಳಿಸುತ್ತದೆ.