ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿ ವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವುದು ರಾಜ್ಯ ಬಿಜೆಪಿಗೆ ಶಕ್ತಿ ಬಂದಂತಾಗಿದೆ ಎಂದು ಗುಂಡ್ಲುಪೇಟೆ ಮಾಜಿ ಶಾಸಕ ಸಿ.ಎಸ್ ನಿರಂಜನಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
“ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಬಿಜೆಪಿ ನಾಯಕರು ಸೂಕ್ತ ತೀರ್ಮಾನ ಮಾಡಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ಸಹಕಾರಿಯಾಗಿದೆ. ಈಗಾಗಲೇ ಹಲವು ಉಪ ಚುನಾವಣೆಯಲ್ಲಿ ವಿಜಯೇಂದ್ರ ಸಾಮರ್ಥ್ಯ ತೋರಿಸಿದ್ದಾರೆ. ಅಂತೆಯೇ ಮುಂದಿನ ದಿನಗಳಲ್ಲಿಯೂ ಕೂಡ ಎಲ್ಲ ಜಾತಿ, ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸುತ್ತಾರೆ” ಎಂದು ತಿಳಿಸಿದ್ದಾರೆ.
“ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧಿಕಾರ ಇಲ್ಲದ ಸಂದರ್ಭದಲ್ಲಿ ರಾಜ್ಯದ ಪ್ರತಿ ಹಳ್ಳಿಗೂ ತಿರುಗಾಡಿ ಪಕ್ಷವನ್ನು ಬಲಗೊಳಿಸಿ ಅಧಿಕಾರಕ್ಕೆ ತಂದಿದ್ದಾರೆ. ಅವರ ಮಾದರಿಯಲ್ಲಿ ವಿಜಯೇಂದ್ರ ಕೂಡ ಕೆಲಸ ನಿರ್ವಹಿಸಲಿದ್ದಾರೆ. ರಾಜ್ಯದ ಹಿರಿಯ ನಾಯಕರ ಮುನಿಸನ್ನೂ ಕೂಡ ಶಮನ ಮಾಡಿ ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಲು ಅಗತ್ಯವಿರುವ ಎಲ್ಲ ರೀತಿಯ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ” ಎಂದರು.
“ಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ರಾಜ್ಯದ ಯುವ ಸಮೂಹದಲ್ಲಿ ಹೆಚ್ಚಿನ ಹುರುಪಿಗೆ ಕಾರಣವಾಗಿದ್ದು, ಯುವಕರಿಗೆ ಪಕ್ಷ ಹೆಚ್ಚಿನ ಮನ್ನಣೆ ಕೊಡಲಿದೆ ಎಂದು ನಿರೂಪಿಸಿದೆ. ಈ ಮೂಲಕ ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೂ ಇದು ಪೂರಕವಾಗಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಿರೋಧ ಪಕ್ಷದ ನಾಯಕ ಅಕಾಂಕ್ಷಿಗಳಲ್ಲಿ ನಾನೂ ಒಬ್ಬ: ಶಾಸಕ ಡಾ ಅಶ್ವತ್ಥನಾರಾಯಣ
“ಕೇಂದ್ರ ನಾಯಕರು ನವೆಂಬರ್ ಅಂತ್ಯದೊಳಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಸೂಚನೆಯಂತೆ ರಾಜ್ಯದಲ್ಲಿ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಆಗಲಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.