ಕೊಡಗು ಜಿಲ್ಲೆಯನ್ನು ಜನಪ್ರತಿನಿಧಿಗಳು ಕ್ರೀಡಾ ವಲಯವೆಂದು ಘೋಷಣೆ ಮಾಡಬೇಕು. ಜತೆಗೆ ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಬೇಕು ಎಂದು ಸಮಾಜಿಕ ಕಾರ್ಯಕರ್ತ ತೇಲಪಂಡ ಶಿವಕುಮಾರ್ ಒತ್ತಾಯಿಸಿದರು.
ವಿರಾಜಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿಯಿಂದ ಆಯೋಜಿಸಿದ್ದ ಅಂತರ ಕೊಡವ ಸಮಾಜಗಳ ನಡುವಣ ಸೀಮಿತ ಓವರ್‌ಗಳ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.
“ಕೊಡವ ಜನಾಂಗದ ಪ್ರತಿಯೊಬ್ಬರಿಗೂ ಹಾಕಿ ಕ್ರೀಡೆಯು ರಕ್ತಗತವಾಗಿ ಬಂದಿದೆ. ಹಾಕಿ ಕ್ರೀಡೆಗೆ ಮಹತ್ವ ನೀಡುವಂತೆ, ಕ್ರಿಕೆಟ್‌ಗೂ ಪ್ರೋತ್ಸಾಹ ನೀಡುವಂತಾಗಬೇಕು. ಕೊಡಗು ಕ್ರೀಡಾ ಜಿಲ್ಲೆಯಾದರು ಕೆಲವು ತಾಂತ್ರಿಕ ಮತ್ತು ದೈಹಿಕ ಸಮಸ್ಯೆಗಳಿಂದಾಗಿ ಜಿಲ್ಲೆಯ ಕ್ರೀಡಾಪಟುಗಳು ದೇಸಿ ಮಟ್ಟದಲ್ಲಿ ಎಡುವುತ್ತಿದ್ದಾರೆ” ಎಂದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕೆ ಸುಬ್ರಮಣಿ ಮಾತನಾಡಿ, “ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಕಾಪಾಡಿಕೊಳ್ಳುವ ಕ್ರೀಡಾಪಟುಗಳು ಉತ್ತಮ ಕ್ರೀಡಾಪಟುವಾಗಲು ಸಾಧ್ಯ. ಬಹುತೇಕ ಯುವಜನರು ಇಂದು ಮೊಬೈಲ್ ಗೀಳಿಗೆ ದಾಸರಾಗಿದ್ದಾರೆ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಕೀತಿಯಂಡ ಕರ್ಸನ್ ಕಾರ್ಯಪ್ಪ ಮಾತನಾಡಿ, “ಜಿಲ್ಲೆಯ ಹಲವೆಡೆಯ ಒಟ್ಟು 10 ಕೊಡವ ಸಮಾಜಗಳ ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಸಂಸ್ಥೆಯ ಎಲ್ಲ ಸದಸ್ಯರು ಮತ್ತು ದಾನಿಗಳ ಸಹಕಾರ ಮರೆಯಲಾಗದು” ಎಂದರು.
ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್, ಪುರಸಭೆ ಸದಸ್ಯೆ ಯಶೋಧಾ ಮಂದಣ್ಣ ಮತ್ತು ಉದ್ಯಮಿ ನಾಗೇಶ್ ಪವನ್, ಕೊಡವ ಕ್ರಿಕೆಟ್ ಅಕಾಡೆಮಿಯ ಎಲ್ಲ ಕಾರ್ಯಕಾರಿ ಮಂಡಳಿ ಸದಸ್ಯರು, ಕ್ರೀಡಾ ಪಟುಗಳು, ಸಮುದಾಯದ ಬಾಂಧವರು ಹಾಗೂ ಕ್ರೀಡಾ ಪ್ರೇಮಿಗಳು ಇದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೆಇಎ ಪರೀಕ್ಷೆ ಅಕ್ರಮ ಪ್ರಕರಣ: ದೈಹಿಕ ಶಿಕ್ಷಕ ವಶಕ್ಕೆ
ಟೂರ್ನಿಯ ಪ್ರಥಮ ಪಂದ್ಯದಲ್ಲಿ ಭಾಗವಹಿಸಿದ್ದ ತಂಡಗಳಾದ ಮಕ್ಕಂದೂರು ಕೊಡವ ಸಮಾಜ ಮತ್ತು ಮೂರ್ನಾಡು ಕೊಡವ ಸಮಾಜಗಳ ಆಟಗಾರರಿಗೆ ಗಣ್ಯರು ಶುಭ ಕೋರಿದರು.
ಚಕ್ಕೇರ ನವೀನ್, ಆಳಮೇಂಗಡ ಮೋಹನ್ ಚಂಗಪ್ಪ ಅವರು ತೀರ್ಪುಗಾರರಾಗಿ ಹಾಗೂ ಅದೇಂಗಡ ಶಾಶ್ವತ್ ಅವರು ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು.