ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರು ಪಾರ್ಟ್ ಟೈಮ್ ಜಾಬ್‌ನಲ್ಲಿ ಹೂಡಿಕೆ ಮಾಡಿ ಬರೋಬ್ಬರಿ ₹23.23ಲಕ್ಷ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಣ ಕಳೆದುಕೊಂಡಿರುವ ಸೌಮ್ಯ(28) (ಹೆಸರು ಬದಲಾಯಿಸಲಾಗಿದೆ) ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಸೌಮ್ಯ, “ಶೀತಲ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿ ವಾಟ್ಸಾಪ್ ಮೂಲಕ ನನ್ನನ್ನು ಸಂಪರ್ಕಿಸಿ, ಚಟ್ನಿ ಎಂಬ ಹೆಸರಿನ ರೆಸ್ಟೋರೆಂಟ್‌ಗೆ ರಿವ್ಯೂ ಬರೆದು ಸ್ಕ್ರೀನ್ ಶಾಟ್ ಕಳಿಸಿದರೇ, ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಬಳಿಕ ಅದರಂತೆಯೇ, ರಿವ್ಯೂ ಬರೆದು ಶೀತಲ್ ಎಂಬ ವ್ಯಕ್ತಿಯಿಂದ ₹200 ಪಡೆದುಕೊಂಡಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.
“ಬಳಿಕ, ಐದು ಟೆಲಿಗ್ರಾಮ್ ಗುಂಪುಗಳಿಗೆ ಸೇರು, ಅದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿ ಆಮಿಷವೊಡ್ಡಿದ್ದಾರೆ. ಅದರಂತೆಯೇ, ಸೌಮ್ಯ ಟೆಲಿಗ್ರಾಮ್ ಗ್ರೂಪ್‌ಗಳಿಗೆ ಸೇರಿದ್ದಾರೆ. ಮೊದಲಿಗೆ ₹1000 ಹೂಡಿಕೆ ಮಾಡಿ, 1300 ಲಾಭ ಪಡೆದಿದ್ದಾರೆ. ಇನ್ನು ಹೆಚ್ಚಿನ ಹಣ ಹಾಕಿದರೇ, ದುಪ್ಪಟ್ಟು ಲಾಭ ಪಡೆಯಬಹುದು ಎಂದು ಹೇಳಿ ನಂಬಿಸಿದ್ದಾರೆ. ಅದರಂತಯೇ ಸೌಮ್ಯ ಕೂಡ ಐದು ಐಸಿಐಸಿಐ ಬ್ಯಾಂಕ್ ಖಾತೆಗಳು, ಒಂದು ಫೆಡರಲ್ ಬ್ಯಾಂಕ್ ಖಾತೆ ಹಾಗೂ ಕೆಲವು ಯುಪಿಐ ಐಡಿಗಳಿಗೆ ₹23,23,315 ಹಣ ವರ್ಗಾವಣೆ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದವರ ಮೇಲೆ ಸಿಸಿಬಿ ದಾಳಿ
ನೀರೀಕ್ಷೆ ಮಾಡಿದ ದುಪ್ಪಟ್ಟು ಹಣವನ್ನು ಹಿಂಪಡೆಯುವ ವೇಳೆ, ವಂಚಕರು ಇನ್ನೂ ಹೆಚ್ಚಿನ ಹೂಡಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ಸೌಮ್ಯ ನವೆಂಬರ್ 9 ರಂದು ವೈಟ್‌ಫೀಲ್ಡ್ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಮ್ (ಸಿಇಎನ್) ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ.
“ಕರೆ ಮಾಡಿದ ನಂಬರ್ ಅನ್ನು ಆನ್ಲೈನ್ನಲ್ಲಿ ಹುಡುಕಾಡಿದಾಗ ಅಮೆರಿಕದಿಂದ ಬಂದಿರಬಹುದು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಸಿಇಎನ್ ಪೊಲೀಸರು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್ 66 (ಡಿ) ಮತ್ತು ಐಪಿಸಿ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.