ಸೋಮವಾರ ನಡೆದ ಸಂಪುಟ ಪುನಾರಚನೆಯಲ್ಲಿ ಗೃಹ ಸಚಿವೆ ಸುಯೆಲ್ಲಾ ಬ್ರವರ್‌ಮನ್ ಅವರನ್ನು ವಜಾಗೊಳಿಸಿದ ನಂತರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಮೊದಲ ಅವಿಶ್ವಾಸ ಪತ್ರವನ್ನು ಎದುರಿಸುತ್ತಿದ್ದಾರೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಿಷ್ಠಾವಂತ ಟೋರಿ ಸಂಸದೆ ಆಂಡ್ರಿಯಾ ಜೆಂಕಿನ್ಸ್, ಸುನಕ್ ಅವರ ಬದಲಿಗೆ “ನಿಜವಾದ ಕನ್ಸರ್ವೇಟಿವ್ ಪಕ್ಷದ ನಾಯಕ”ನಿಗಾಗಿ ಕರೆ ನೀಡಿದ್ದಾರೆ.
“ಸಾಕು ಸಾಕು… ರಿಷಿ ಸುನಕ್ ಹೋಗುವ ಸಮಯ ಬಂದಿದೆ…” ಎಂದು ಎಕ್ಸ್‌ನಲ್ಲಿ ಅವರು ಬರೆದು ತಮ್ಮ ಅವಿಶ್ವಾಸ ಪತ್ರವನ್ನು ಹಂಚಿಕೊಂಡಿದ್ದಾರೆ.
ಸ್ವಂತ ಪಕ್ಷದ ಸಂಸದೆಯೇ ಪ್ರಧಾನಿ ವಿರುದ್ಧ ಅವಿಶ್ವಾಸ ಪತ್ರ ಕಳಿಸಿರುವುದು ಬ್ರಿಟನ್‌ನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಹೌಸ್ ಆಫ್ ಕಾಮನ್ಸ್ ವ್ಯವಹಾರಗಳನ್ನು ನೋಡಿಕೊಳ್ಳುವ 1992 ಸಮಿತಿ ಅಧ್ಯಕ್ಷ ಗ್ರಹಾಂ ಬ್ರಾಡ್‌ಗೆ ಆಕೆ ಪತ್ರವನ್ನು ಕಳಿಸಿದ್ದಾರೆ.
ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಿಷ್ಠಾವಂತರಾದ ಟೋರಿ, ಸಂಪುಟದಿಂದ ಸುಯೆಲ್ಲಾ ಅವರನ್ನು ವಜಾಗೊಳಿಸಿದ್ದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ‘ರಿಷಿ ಸುನಕ್ ತನ್ನ ಸಂಪುಟದಲ್ಲಿ ಸತ್ಯ ಮಾತನಾಡುತ್ತಿದ್ದ ಏಕೈಕ ವ್ಯಕ್ತಿಯ ಮೇಲೆ ಪ್ರಹಾರ ಮಾಡಿದ್ದಾರೆ. ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಿಷಿ ಸುನಕ್ ಹುದ್ದೆಯಿಂದ ಇಳಿಯುವ ಸಮಯ ಬಂದಿದೆ’ ಎಂದಿರುವ ಆಂಡ್ರಿಯಾ, ಪ್ರಧಾನಿ ವಿರುದ್ಧ ಅವಿಶ್ವಾಸ ಪತ್ರ ಬರೆಯುವಂತೆ ಇತರ ಸಂಸದರಿಗೂ ಕರೆ ನೀಡಿದ್ದಾರೆ.
ರಿಷಿ ಸುನಕ್ ಪ್ರಧಾನಿಯಾದ ನಂತರ ಸಂಸದರೊಬ್ಬರು ಅವಿಶ್ವಾಸ ಪತ್ರ ಬರೆದಿರುವುದು ಇದೇ ಮೊದಲ ಬಾರಿ. ಆದರೆ, ಇದರಿಂದ ರಿಷಿ ಸುನಕ್ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯ ಎದುರಿಸುವ ಅಗತ್ಯವಿಲ್ಲ. ಆಡಳಿತ ಪಕ್ಷದ ಒಟ್ಟು ಸಂಸದರ ಪೈಕಿ ಶೇ.15ರಷ್ಟು ಮಂದಿ ಅವಿಶ್ವಾಸ ವ್ಯಕ್ತಪಡಿಸಿದರೆ, ಆಗ ಪ್ರಧಾನಿ ವಿಶ್ವಾಸ ಮತವನ್ನು ಗೆಲ್ಲಬೇಕಾಗುತ್ತದೆ.
ಈ ಸುದ್ದಿ ಓದಿದ್ದೀರಾ: ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ನೆಹರೂ: ಸಿಎಂ ಸಿದ್ದರಾಮಯ್ಯ
ಹಲವು ಬಾರಿ ವಿವಾದಗಳಿಗೆ ಗುರಿಯಾಗಿದ್ದ ಸುಯೆಲ್ಲಾ ಬ್ರವರ್‌ಮನ್ ಅವರನ್ನು ಸಂಪುಟದಿಂದ ವಜಾಗೊಳಿಸುತ್ತಿರುವುದಾಗಿ ರಿಷಿ ಸುನಕ್ ಸರ್ಕಾರ ಸೋಮವಾರ ಪ್ರಕಟಿಸಿತ್ತು. ಆ ಸ್ಥಾನವನ್ನು ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಅವರಿಗೆ ನೀಡಲಾಗಿದೆ. ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್‌ಗೂ ಸಂಪುಟದಲ್ಲಿ ಸ್ಥಾನ ನೀಡಲಾಗಿದ್ದು, ಅವರಿಗೆ ವಿದೇಶಾಂಗ, ಕಾಮನ್‌ವೆಲ್ತ್, ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ.