ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ನೀಲಸಂದ್ರ ಗ್ರಾಮದಲ್ಲಿ ಅಧಿಕಾರಿಗಳು ಸ್ಮಶಾನಕ್ಕೆ ಜಾಗ ಗುರುತಿಸಿಲ್ಲ. ಹೀಗಾಗಿ, ಪರಿಶಿಷ್ಟರು ತಮ್ಮ ಸಮುದಾಯದಲ್ಲಿ ಮೃತಪಟ್ಟವರ ಸಂಸ್ಕಾರಕ್ಕೆ ಪರದಾಡುವಂತಾಗಿದೆ.
ನ.12ರಂದು ನರಸಿಂಹಯ್ಯ (65) ಎಂಬುವವರು ಮೃತಪಟ್ಟಿದ್ದರು. ಸೋಮವಾರ ಬೆಳಗ್ಗೆ ಸಂಬಂಧಿಕರು ಸಾರ್ವಜನಿಕ ಸ್ಮ ಶಾನ ಎಂದು ಗುರುತಿಸಲಾದ ಜಾಗದಲ್ಲಿ ಅಂತ್ಯಕ್ರಿಯೆಗಾಗಿ ಮುಂದಾದಾಗ, ಜಮೀನು ತಮಗೆ ಸೇರಿದ್ದು ಎಂದು ವ್ಯಕ್ತಿಯೊಬ್ಬರು ಅಂತ್ಯಕ್ರಿಯೆಗೆ ಅವಕಾಶ ನೀಡಲಿಲ್ಲ. ಹೀಗಾಗಿ ಮೃತರ ಸಂಬಂಧಿಕರು ಅಧಿಕಾರಿಗಳ ಗಮನಕ್ಕೆ ತಂದರು.
ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ದಾಖಲಾತಿ ಪರಿಶೀಲಿಸಿದರೂ ವಿವಾದ ಬಗೆಹರಿಸಲಾಗಲಿಲ್ಲ. ಸಂಬಂಧಿಕರು ಗ್ರಾಮದ ಕಾಡಿನ ಅಂಚಿನಲ್ಲಿ ಅಂತ್ಯಕ್ರಿಯೆ ನಡೆಸಿದರು. ಕಂದಾಯ ಇಲಾಖೆಯಿಂದ ಸರ್ವೆ ನಂ. 30-2ರಲ್ಲಿ ಸಾರ್ವಜನಿಕ ಸ್ಮಶಾನಕ್ಕೆ 16ಗುಂಟೆ ಜಮೀನು ಮಂಜೂರಾಗಿದೆ. ಹದ್ದುಬಸ್ತು ನಿಗದಿ ಮಾಡಿಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಕಂದಾಯ ಇಲಾಖೆಯಿಂದ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರಾದ ಜಾಗವನ್ನು ಗುರುತಿಸಿ, ಗ್ರಾಮ ಪಂಚಾಯಿತಿ ವಶಕ್ಕೆ ನೀಡುವಲ್ಲಿ, ಕಂದಾಯ ಇಲಾಖೆ ವಿಫಲವಾಗಿದೆ. ಸ್ಥಳವನ್ನು ವಶಕ್ಕೆ ಪಡೆದು ಸ್ಮಶಾನದ ಜಾಗವನ್ನು ಸಂರಕ್ಷಣೆ ಮಾಡಿ, ಅಭಿವೃದ್ಧಿ ಪಡಿಸುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲರಾದ ಕಾರಣ ಪರಿಶಿಷ್ಟರು ಮೃತಪಟ್ಟಾಗ ಅಂತ್ಯಕ್ರಿಯೆಗೆ ಸಮಸ್ಯೆಯಾಗುತ್ತಿದೆ ಎಂದು ದಲಿತ ಮುಖಂಡರು ದೂರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ, ವಿಶ್ವನಾಥ್, ಈ ಹಿಂದೆ ಇದ್ದ ಸರ್ವೇಯರ್ ಸ್ಮಶಾನದ ಜಾಗವನ್ನು ಖಾಸಗಿ ಹಿಡುವಳಿದಾರರ ಜಮೀನಿಗೆ ಸ್ಕೇಚ್ ಮಾಡಿಕೊಟ್ಟ ಕಾರಣ ಸಮಸ್ಯೆಯಾಗಿದೆ. ಬೇರೆ ಜಾಗ ಗುರುತಿಸಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.