- ‘1074 ಪ್ರಕರಣಗಳು ಇನ್ನೂ ಸರ್ಕಾರದ ಹಂತದಲ್ಲಿ ಬಾಕಿ ಇವೆ’
- ‘ಭ್ರಷ್ಟಾಚಾರ ತಡೆಗೆ ಇಲಾಖಾ ಮುಖ್ಯಸ್ಥರು ಸಹ ಮುಂದಾಗಬೇಕು’
ದುರಾಡಳಿತ ಎಂಬ ಪಿಡುಗು ಲೋಕಾಯುಕ್ತ ಸಂಸ್ಥೆಯನ್ನು ನಿಶ್ಯಕ್ತಗೊಳಿಸಿದೆ. ಲೋಕಾಯುಕ್ತಕ್ಕೆ ಆಘಾತಕಾರಿ ಪರಿಣಾಮಗಳನ್ನು ತಂದೊಡ್ಡಿದೆ. ನಮ್ಮ ಸಂಸ್ಥೆಯಿಂದ ಅನೇಕ ಸರ್ಕಾರಿ ಕಚೇರಿಗಳ ಮತ್ತು ಸಂಸ್ಥೆಗಳ ಮೇಲೆ ದಾಳಿ ನಡೆಸಿ ವಿಚಾರಣೆಯನ್ನು ಕೈಗೊಂಡು ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡಲಾಗಿದೆ. ಆದರೆ, ಈ ಬಗ್ಗೆ ಸೀಮಿತ ಫಲಿತಾಂಶ ಮಾತ್ರ ಬಂದಿದೆ. ಹೀಗಾಗಿ ಸಮಗ್ರ ಬದಲಾವಣೆ ಅಗತ್ಯವಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅಭಿಪ್ರಾಯ ಪಟ್ಟರು.
2023ನೇ ಸಾಲಿನ ಜಾಗೃತ ಅರಿವು ಸಪ್ತಾಹದ ಅಂಗವಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಹುನಗುಂದ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭವನ್ನು ಪ್ರಸ್ತಾಪಿಸಿ, “ಸದರಿ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆಯಲ್ಲಿ ಎಲ್ಲ ಸವಲತ್ತು ನೀಡಿದ್ದರೂ ಸಹ ಯಾವುದೇ ವೈದ್ಯರು ಅಲ್ಲಿ ನಿಯೋಜನೆಯಾಗಿಲ್ಲ. ಹೆರಿಗೆಗಾಗಿ ಬಂದ ಗರ್ಭಿಣಿ ಸ್ತ್ರೀಯರು ಪರದಾಡುವುದನ್ನು ಗಮನಿಸಿ, ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡು ಸರ್ಕಾರದ ಗಮನವನ್ನು ಸೆಳೆದಾಗ ಸರ್ಕಾರವು ಕೂಡಲೇ ಸ್ಪಂದಿಸಿ, ವೈದ್ಯರನ್ನು ನಿಯೋಜಿಸಿತು” ಎಂದರು.
“ಲೋಕಾಯುಕ್ತ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯಿಂದ ಮಾತ್ರವೇ ಭ್ರಷ್ಟಾಚಾರವನ್ನು ಹೋಗಲಾಡಿಸಲು ಅಥವಾ ದುರಾಡಳಿತವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯಿಂದ, ಇಲಾಖಾ ಮುಖ್ಯಸ್ಥರು ಸಹ ಮುಂದಾಗಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿದು ಉಳಿದ ಮಣ್ಣಿನ ಹಣತೆಯಲ್ಲಿ ಎಣ್ಣೆ ಹೆಕ್ಕುವ ಬಡವರು ಮತ್ತು ವಿಶ್ವಗುರು
“ದೂರುಗಳ ಬಗ್ಗೆ ತನಿಖೆ ಕೈಗೊಂಡು ಮೇಲ್ನೋಟಕ್ಕೆ ಆಪಾದನೆಗಳು ಸತ್ಯವೆಂದು ಕಂಡುಬಂದ ಪ್ರಕರಣಗಳಲ್ಲಿ ಕಳುಹಿಸಲಾದ ಅನೇಕ ಶಿಫಾರಸ್ಸುಗಳು ಸರ್ಕಾರದ ಮಟ್ಟದಲ್ಲಿಯೇ ಬಾಕಿ ಉಳಿದಿವೆ, ಈ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಗಮನ ಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಕೋರಿದರು.
“ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಆಪಾದನೆಗಳು ಸಾಬೀತಾಗಿ ದಂಡನೆ ವಿಧಿಸಲು ಶಿಫಾರಸ್ಸು ಮಾಡಲಾದ 1074 ಪ್ರಕರಣಗಳು ಇನ್ನೂ ಸರ್ಕಾರದ ಹಂತದಲ್ಲಿ ಬಾಕಿ ಇವೆ. ಶಿಫಾರಸ್ಸು ಮಾಡಲಾದ ಒಂದು ಪ್ರಕರಣದಲ್ಲಿ ಆಪಾದಿತ ಅಧಿಕಾರಿಯ ಸೇವೆಯು ಇನ್ನೂ ಎರಡು ವರ್ಷಗಳಿದ್ದಾಗಲೇ ಮಾಡಿದ್ದರೂ ಸಹ ಆ ಅಧಿಕಾರಿಯು ನಿವೃತ್ತಿಯಾಗುವವರೆವಿಗೂ ಯಾವುದೇ ಕ್ರಮ ಕೈಗೊಳ್ಳದೇ, ನಿವೃತ್ತಿಯ ನಂತರ ಅವರ ಪಿಂಚಣಿಯನ್ನು ತಡೆಹಿಡಿಯಲಾಗಿದೆ. ಆ ಅಧಿಕಾರಿಯು ಎರಡು ವರ್ಷಗಳ ಕಾಲ ಸೇವೆಯಲ್ಲಿ ಮುಂದುವರೆದಿದ್ದು, ದುರಾಡಳಿತಕ್ಕೆ ಹಿಡಿದ ಕನ್ನಡಿ” ಎಂದರು.