ಗದಗ ಜಿಲ್ಲೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ತವರು. ಆದರೆ, ಕಾನೂನು ಸಚಿವರ ತವರಲ್ಲೇ ಕಾನೂನು ಉಲ್ಲಂಘಸಿ ಬೇಕಾಬಿಟ್ಟಿ ವಿಂಡ್ ಯಂತ್ರಗಳು ಅಳವಡಿಸಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಗದಗ ಜಿಲ್ಲೆಯನ್ನು ಏಶಿಯಾ ಖಡದಲ್ಲೇ ಅತೀ ವೇಗವಾಗಿ ಗಾಳಿ ಬಿಸುವ ಸ್ಥಳ ಎಂದು ಗುರುತಿಸಲಾಗುತ್ತದೆ. ಹೀಗಾಗಿ, ಇಲ್ಲಿ ಅನೇಕ ವಿಂಡ್ ಕಂಪನಿಗಳು ಲಗ್ಗೆ ಇಟ್ಟಿವೆ. ಎಲ್ಲಿ ಕಣ್ಣು ಹಾಯಿಸಿದ್ರೂ ವಿಂಡ್ ಫ್ಯಾನ್‌ಗಳೇ ಕಣ್ಣಿಗೆ ರಾಚುತ್ತವೆ. ರಿನೋಬಲ್ ಎನರ್ಜಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲ ಸಡಲಿಕೆ ನೀಡಿವೆ. ಆದರೆ, ಇದನ್ನೆ ಬಂಡವಾಳ ಮಾಡಿಕೊಂಡ ಬಂಡವಾಳ ಶಾಹಿಗಳು ಬೇಕಾಬಿಟ್ಟಿ ಪವನ ವಿದ್ಯುತ್ ಯಂತ್ರಗಳನ್ನು ಜಿಲ್ಲೆಯಲ್ಲಿ ಅಳವಡಿಸಿದ್ದಾರೆ.
ವಿಂಡ್ ಫ್ಯಾನ್ ಅಳವಡಿಸಬೇಕಾದರೆ ಮೊದಲು ಗ್ರಾಮ ಪಂಚಾಯತ್ಗೆ ಟ್ಯಾಕ್ಸ್ ತುಂಬಿ ಅನುಮತಿ ಪಡೆಯಬೇಕು. ಬಳಿಕ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ಜಮೀನು ಕೃಷಿಯೇತರ ಜಮೀನಾಗಿ (ಎನ್‌ಎ) ಪರಿವರ್ತನೆ ಮಾಡಬೇಕು. ಬಳಿಕ ಪಂಚಾಯತ್ ಎನ್ಒಸಿ ಪಡೆಯಬೇಕು. ಆದರೆ, ಇದ್ಯಾವ ಕೆಲಸ ಮಾಡದ ವಿಂಡ್ ಕಂಪನಿಗಳು ನೂರಾರು ಪವನ ವಿದ್ಯುತ್ ಯತ್ರಗಳನ್ನು ಈಗಾಗಲೇ ರೈತರ ಜಮೀನುಗಳಲ್ಲಿ ಅಳವಡಿಸಿದ್ದಾರೆ. ವಿದ್ಯುತ್ ಉತ್ಪಾದನೆ ಸಹ ನಡೆದಿದೆಯಂತೆ.
ಪಂಚಾಯತ್ ಆಡಳಿತ ಪ್ರಶ್ನೆ ಮಾಡಿದಕ್ಕೆ ಕಂಪನಿಗಳು ಈಗ ಎಚ್ಚೆತ್ತುಕೊಂಡು ಪಂಚಾಯತ್ಗೆ ಓಡಿ ಬಂದಿದ್ದಾರೆ. ಈಗ ಅನುಮತಿಗಾಗಿ ಅರ್ಜಿ ಹಾಕಿದ್ದಾರಂತೆ. ಈ ಬಗ್ಗೆ ಮಾದ್ಯಮದವರು ಪಿಡಿಓ ಅವರನ್ನು ಕೇಳಿದ್ರೆ, ಇದು ಕಂದಾಯ ಇಲಾಖೆ ಜಮೀನು. ಕೃಷಿಯೇತರ ಆದ ಬಳಿಕ ನಮ್ಮ ವ್ಯಾಪ್ತಿಗೆ ಬರುತ್ತೆ. ಇನ್ನೂ ಎನ್ಎ ಆಗಿಲ್ಲ. ಈಗಾಗಲೇ ಫ್ಯಾನ್‌ಗಳನ್ನು ಅಳವಡಿಸಿದ್ದಾರೆ ಎಂದು ಪಂಚಾಯತ್ ಅಧಿಕಾರಿಗಳು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ.
ಜಿಲ್ಲೆಯಲ್ಲಿ ಗದಗ, ರೋಣ, ಗಜೇಂದ್ರಗಢ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳಲ್ಲಿ 500ಕ್ಕೂ ಅಧಿಕ ವಿವಿಧ ಕಂಪನಿಗಳು ಪವನ ವಿದ್ಯುತ್ ಯಂತ್ರಗಳನ್ನು ಅಳವಡಿಸಿವೆ. ಬಹುತೇಕ ಗ್ರಾಮ ಪಂಚಾಯತ್ ಗಳಿಂದ ಅನುಮತಿಯೂ ಪಡೆಯಲ್ಲಿ, ಎನ್ಓಸಿ ಕೂಡ ಪಡೆಯದೇ ಅಳವಡಿಸಲಾಗಿದೆ. ಈ ಕಂಪನಿಗಳು ಆಡಿದ್ದೇ ಆಟವಾಗಿದೆ. ಸರ್ಕಾರದ ಯಾವುದೇ ನಿಯಮ, ಕಾನೂನು ಪಾಲನೆ ಮಾಡುತ್ತಿಲ್ಲ.
ಸರ್ಕಾರಕ್ಕೆ ತೆರಿಗೆ ವಂಚನೆಯಾಗುತ್ತಿದೆ. ಈ ವಿಷಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗೋತ್ತಿದ್ರೂ ಮೌನಕ್ಕೆ ಶರಣಾಗಿದ್ದಾರೆ. ಗ್ರಾಮ ಪಂಚಾಯತ್ ಆಡಳಿತಗಳು ತೆರಿಗೆ ಮೋಸಕ್ಕೆ ಆಕ್ರೋಶ ವ್ಯಕ್ತಪಡಿಸಿವೆ. ಇಷ್ಟಾದರೂ, ಕಂದಾಯ ಇಲಾಖೆ ಮಾತ್ರ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನೋ ಆರೋಪಗಳಿವೆ.
ಇನ್ನೂ ಈ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಕೆಲ ಸಡಲಿಕೆ ಇವೆ. ಪಂಚಾಯತ್ ಗಳು ಸರಿಯಾದ ಸಮಯಕ್ಕೆ ಅನುಮತಿ ನೀಡಬೇಕು. ವಿದ್ಯುತ್ ಉತ್ಪಾದನೆ ಆಗಬೇಕು. ಇಲ್ಲವಾದಲ್ಲಿ, ರೈತರಿಗೆ ವಿದ್ಯುತ್ ನೀಡಲು ಸಾಧ್ಯವಿಲ್ಲ. ವರದಿ ಪಡೆದುಕೊಳ್ಳುತ್ತೇನೆ.. ಕಂದಾಯ ಇಲಾಖೆಯಿಂದ ನಿಯಮ ಉಲ್ಲಂಘನೆಯಾಗಿದ್ದರೆ, ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.