₹20 ಲಕ್ಷ ಮೌಲ್ಯದ 374 ಗ್ರಾಂ ಚಿನ್ನಾಭರಣ ಕದ್ದಿದ್ದ ಮನೆಗೆಲಸ ಮಾಡುವ ಮಹಿಳೆಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮಮ್ಮ (53) ಬಂಧಿತ ಆರೋಪಿ. ಕಾಮಾಕ್ಷಿಪಾಳ್ಯದ ಮೀನಾಕ್ಷಿನಗರದಲ್ಲಿರುವ ರಂಜಿತಾ ಎಂಬುವವರ ಮನೆಯಲ್ಲಿ ಲಕ್ಷ್ಮಮ್ಮ ಕಳೆದ 9 ತಿಂಗಳಿನಿಂದ ಮನೆಗೆಲಸ ಮಾಡಿಕೊಂಡಿದ್ದರು.
ರಂಜಿತಾ ತಮ್ಮ ಮಾವನಿಗೆ ಚಿನ್ನದ ಸರ್ ಕೊಡುವ ಸಲುವಾಗಿ ಕರ್ಬೋರ್ಡ್ ತೆಗೆದು ನೋಡಿದಾಗ ಚಿನ್ನ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಮನೆ ಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿ ಮನೆ ಮಾಲಕಿ ರಂಜಿತಾ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಂಜಿತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಕ್ಷಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಲಕ್ಷ್ಮಮ್ಮ ಕಳ್ಳತನ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.
ಈ ಸುದ್ದಿ ಓದಿದ್ದೀರಾ? ‘ಹೆಚ್ಎಸ್ಆರ್ಪಿ’ ನಂಬರ್ ಪ್ಲೇಟ್ ಅಳವಡಿಕೆಗೆ ಫೆ.17ರವರೆಗೂ ಅವಕಾಶ; ಸಾರಿಗೆ ಇಲಾಖೆ
ಚಿನ್ನ ಕದ್ದ ಕಳ್ಳರ ಬಂಧನ
ರಾತ್ರೋರಾತ್ರಿ ಶ್ರೀಮಂತರಾಗಬೇಕು ಎಂಬ ದುರಾಸೆಯಿಂದ ಚಿನ್ನ ಕಳ್ಳತನಕ್ಕೆ ಹೊಂಚು ಹಾಕಿದ್ದ ಆರೋಪಿಗಳನ್ನು ಬೆಂಗಳೂರಿನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಸುಹೇಲ್, ಯೂಸೂಫ್, ಮಹಮ್ಮದ್ ರಿಜ್ವಾನ್ ಹಾಗೂ ಸೈಯ್ಯದ್ ಅಜ್ಮತ್ ಬಂಧಿತ ಆರೋಪಿಗಳು. ವೃತ್ತಿಯಲ್ಲಿ ಸುಹೇಲ್ ಕಾರ್ಪೆಂಟರ್, ಯೂಸೂಫ್ ವೆಲ್ಡಿಂಗ್, ಮಹಮ್ಮದ್ ರಿಜ್ವಾನ್ ಪೇಂಟರ್, ಸೈಯ್ಯದ್ ಅಜ್ಮತ್ ಕಾರ್ ಸೀಟ್ ಕವರ್ ಹೊಲಿಯುವ ಕೆಲಸ ಮಾಡುತ್ತಿದ್ದರು.
ಇವರಿಗೆ ಹೆಚ್ಚಾಗಿ ಆದಾಯ ಬರುತ್ತಿರಲಿಲ್ಲ. ಹೀಗಾಗಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ನಾಲ್ಕು ಜನ ಸೇರಿ ಚಿನ್ನಾಭರಣ ಅಂಗಡಿಯನ್ನು ಕಳ್ಳತನ ಮಾಡಲು ಹೊಂಚು ಹಾಕಿದ್ದರು. ಅದರಂತೆ ಕದಿರೇನಹಳ್ಳಿ ಪಾರ್ಕ್ ರಸ್ತೆಯಲ್ಲಿರುವ ಸೂಜರ್ ಜ್ಯುವೆಲ್ಲರ್ಸ್ಗೆ ಕಳ್ಳತನ ಮಾಡಲು ತೆರಳಿದ್ದರು. ಈ ವೇಳೆ, ಅಂಗಡಿಯಲ್ಲಿ ಚಿನ್ನ ಬದಲು ಬೆಳ್ಳಿ ಇತ್ತು. ಬಳಿಕ 30 ಕೆಜಿ ಬೆಳ್ಳಿಯನ್ನು ಕಳ್ಳತನ ಮಾಡಿದ್ದರು.
ಕಳ್ಳತನವಾದ ಬಗ್ಗೆ ತಿಳಿದ ಮಾಲೀಕ ಪೊಲೀಸರಿಗೆ ದೂರು ನೀಡಿದ್ದನು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.