ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ ಮೀಸಲಾತಿ ವಿಚಾರವಾಗಿ ಮರಾಠಾ ಸಮುದಾಯದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮರ್ಲಾಕ್ ಗ್ರಾಮದ ನಿವಾಸಿ ದಾಜಿಬಾ ರಾಮದಾಸ್ ಕದಮ್ (23) ಯಾವುದೋ ಕೆಲಸಕ್ಕಾಗಿ ನಾಂದೇಡ್ಗೆ ಬಂದಿದ್ದರು. ಅವರು ನಗರದ ಝೆಂಡಾ ಚೌಕ್ ಪ್ರದೇಶದಲ್ಲಿ ವಿಷಕಾರಿ ಪದಾರ್ಥವನ್ನು ಸೇವಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದಾಜಿಬಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಸಂಬಂಧಿಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆತನ ಬಳಿ ಚೀಟಿಯೊಂದು ಪೊಲೀಸರಿಗೆ ಸಿಕ್ಕಿದೆ. ಅದರಲ್ಲಿ, “ಇದು ನನಗೆ ಸರ್ಕಾರಿ ಉದ್ಯೋಗದ ಪ್ರಶ್ನೆ. ‘ಏಕ್ ಮರಾಠಾ, ಲಕ್ಷ ಮರಾಠಾ’ ಎಂದು ಬರೆಯಲಾಗಿತ್ತು” ಎಂದು ಹೇಳಿದ್ದಾರೆ.
ಭಾಗ್ಯನಗರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣದ ದಾಖಲಿಸಲಾಗಿದೆ.
ಮಹಾರಾಷ್ಟ್ರದಲ್ಲಿ 30%ಗಿಂತ ಹೆಚ್ಚು ಜನಸಂಖ್ಯೆ ಇರುವ ಮರಾಠರು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಡಿಸೆಂಬರ್ 24ರೊಳಗೆ ಮೀಸಲಾತಿ ಘೋಷಣೆ ಮಾಡುವಂತೆ ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ರಾಜ್ಯ ಸರ್ಕಾರಕ್ಕೆ ಹೊಸ ಗಡುವು ನೀಡಿದ್ದಾರೆ.
ಮರಾಠಾ ಯುವಕರು ಮೀಸಲಾತಿಗಾಗಿ ಶಾಂತಿಯುತವಾಗಿ ಹೋರಾಟ ನಡೆಸಬೇಕು. ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಆದಾಗ್ಯೂ, ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.